ಗುಂಡೂರಾವ್ ಭೇಟಿಗೂ ಮೊದಲೇ ದಳಪತಿಗಳ ಗಂಭೀರ ಚರ್ಚೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಟಿಕೆಟ್​ ಹಂಚಿಕೆ ಸಂಬಂಧ ಇಂದು ಕಾಂಗ್ರೆಸ್-ಜೆಡಿಎಸ್ ಚರ್ಚೆ ನಡೆಸಲಿವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಇಂದು ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡರನ್ನ ಭೇಟಿ ಮಾಡಲಿದ್ದಾರೆ. ಆದ್ರೆ ಗುಂಡೂರಾವ್ ಭೇಟಿಗೂ ಮೊದಲೇ ದಳಪತಿಗಳು ಗಂಭೀರ ಚರ್ಚೆ ನಡೆದಿದ್ದು, ಕುತೂಹಲ ಮೂಡಿಸಿದೆ.

ಹಾಲಿ ಸಂಸದರ ಕ್ಷೇತ್ರಗಳಲ್ಲಿ ರಾಜಿಯೇ ಇಲ್ಲಾ ಎಂಬ ಕಾಂಗ್ರೆಸ್​​ ನಾಯಕರ ತೀರ್ಮಾನಕ್ಕೆ ಜೆಡಿಎಸ್‌ ವರಿಷ್ಠ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಇಂದು ದಿಢೀರ್ ದೇವೇಗೌಡರನ್ನ ಭೇಟಿ ಮಾಡಿದ ಕುಮಾರಸ್ವಾಮಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಗೌಹಾಟಿ ಪ್ರವಾಸದ ಬಳಿಕ ತಡರಾತ್ರಿ ದೇವೇಗೌಡರು ಬೆಂಗಳೂರಿಗೆ ವಾಪಸ್ಸಾಗಿದ್ದು, ಇಂದು ಪದ್ಮನಾಭನಗರಕ್ಕೆ ಕುಮಾರಸ್ವಾಮಿ ಭೇಟಿ ನೀಡಿ ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ.  ಹಾಲಿ ಸಂಸದರ ಕ್ಷೇತ್ರಗಳ ವಿಚಾರದಲ್ಲಿ ರಾಜಿ ಇಲ್ಲಾ ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದಾರೆ. ನಮ್ಮ ಜೊತೆ ಚರ್ಚೆ ನಡೆಸುವುದಕ್ಕೂ ಮೊದಲೇ ಹೀಗೆ ಮಾಧ್ಯಮಗಳ ಮುಂದೆ ಹೇಳಿರುವುದಕ್ಕೆ ಹೆಚ್​ಡಿಡಿ ಹಾಗೂ ಹೆಚ್​​ಡಿಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.