ದೇವೇಗೌಡರ ಷರತ್ತು! ಮಂಡ್ಯದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಹಿಂದೇಟು..!

ಮಂಡ್ಯ: ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ಈಗಾಗಲೇ ದೇವೇಗೌಡರು, ನಮ್ಮ ಕುಟುಂಬಸ್ಥರು ಯಾರು ಸ್ಪರ್ಧಿಸಲ್ಲ ಎನ್ನುವ ಮೂಲಕ ಮೊಮ್ಮಕ್ಕಳ ಆಸೆಗೆ ತಣ್ಣಿರೆರೆಚಿದ್ದಾರೆ. ಅಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್​ನಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ದೇವೇಗೌಡರು ಉಪಚುನಾವಣೆಗೆ ಟಿಕೆಟ್ ನೀಡುತ್ತೇವೆ. ಆದರೆ ಸಾರ್ವತ್ರಿಕ ಚುನಾವಣೆಗೆ ಮತ್ತೆ ಟಿಕೆಟ್​ ಭರವಸೆ ನೀಡಲ್ಲ ಎನ್ನುವ ಷರತ್ತು ವಿಧಿಸಿದ್ದಾರೆ. ಆದರೆ ಆಕಾಂಕ್ಷಿಗಳು ಸಾರ್ವತ್ರಿಕ ಚುನಾವಣೆಗೂ ಟಿಕೆಟ್ ಭರವಸೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಕೇವಲ ನಾಲ್ಕು ತಿಂಗಳ ಅಧಿಕಾರಕ್ಕೆ ಹಣ ಖರ್ಚು ಮಾಡಲು ಒಪ್ಪುತ್ತಿಲ್ಲ. ಹೀಗಾಗಿ ಅಭ್ಯರ್ಥಿ ಆಯ್ಕೆ ಕಗ್ಗಾಂಟಾಗಿ ಪರಿಣಮಿಸಿದೆ.

ಮೊಮ್ಮಕ್ಕಳು ಸ್ಪರ್ಧಿಸಲ್ಲ ಎಂದು ದೇವೇಗೌಡರು ಹೇಳಿದ ಮೇಲೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಆಕಾಂಕ್ಷಿಗಳು ಉಪ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡರೆ ಸಾರ್ವತ್ರಿಕ ಚುನಾವಣೆಗೆ ತಮಗೆ ಟಿಕೆಟ್ ಕೊಡುತ್ತಾರೆ ಎಂದುಕೊಂಡಿದ್ದರು. ಆದ್ರಿಂದ ವರಿಷ್ಠರ ಮೇಲೆ ಒತ್ತಡ ಹಾಕಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಲಾಬಿ ನಡೆಸಿದ್ದರು. ಇದೀಗ ಹೊಸ ಷರತ್ತಿನ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇನ್ನು ದೇವೇಗೌಡರ ಈ ಷರತ್ತಿನ ಹಿಂದೆ ಕುಟುಂಬದ ರಾಜಕೀಯದ ಷಡ್ಯಂತ್ರ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಉಪ-ಚುನಾವಣೆಯಲ್ಲಿ ಸ್ಪರ್ಧಿಸಲು ಶಿವರಾಮೇಗೌಡ ಹಾಗೂ ಲಕ್ಷ್ಮೀ ಅಶ್ವಿನ್‌ ಗೌಡ ಒಲವು ತೋರಿಸಿದ್ದರು. ಇವರ ಜೊತೆ ಅನೇಕ ಜಿಲ್ಲಾ ನಾಯಕರು ಸ್ಪರ್ಧಿಸಲು ಮುಂದಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv