ಕಾಫಿನಾಡಿನಲ್ಲಿ ದಂತ ಚೋರರ ಹಾವಳಿ..!

ಚಿಕ್ಕಮಗಳೂರು: ಆನೆದಂತ, ಚಿಪ್ಪುಹಂದಿಯ ಚಿಪ್ಪು, ಜಿಂಕೆ ಕೊಂಬುಗಳನ್ನು ಖರೀದಿಸಿ ಬೇರೆ ಕಡೆ ಮಾರಾಟ ಮಾಡಲು ಹೊಂಚು ಹಾಕಿದ್ದ ಕಳ್ಳಸಾಗಾಣಿಕೆದಾರ ಜಾಲವನ್ನ ಪತ್ತೆ ಹಚ್ಚಿ ಆರು ಜನ ದಂತ ಚೋರರನ್ನು ವಶಕ್ಕೆ ಪಡೆಯುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಲಕ್ಕವಳ್ಳಿ ಭದ್ರಾ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ ಮತ್ತು ಕಡೂರು ವಲಯ ಅರಣ್ಯಾಧಿಕಾರಿ ಕೆ.ಎಸ್.ಮೋಹನ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಬೀರೂರು ಹೊರವಲಯ ಜೋಡಿತಿಮ್ಮಾಪುರ ರೈಲ್ವೇಗೇಟ್ ಬಳಿ ಇಂಡಿಕಾ ಕಾರನ್ನ ತಡೆದು ಪರಿಶೀಲನೆ ನಡೆಸಿದಾಗ, ಕಾರಿನಲ್ಲಿ ನಾಲ್ಕು ಕೆ.ಜಿ ಆನೆದಂತ, 11 ಕೆ.ಜಿ ಚಿಪ್ಪುಹಂದಿಯ ಚಿಪ್ಪು, 2 ಜಿಂಕೆಕೊಂಬು, 2 ಕಾಡುಕೋಣದ ಕೊಂಬುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರಿನಲ್ಲಿದ್ದ ಆರು ಜನರ ಪೈಕಿ ಮೂವರು ಪರಾರಿಯಾಗಿದ್ದರು ಅವರನ್ನು ಸಹ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಈ ಜಾಲವು ಕೇರಳ ರಾಜ್ಯದಿಂದ ಕಾರ್ಯ ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದ್ದು ಕಾರ್ಯಾಚರಣೆ ವೇಳೆ ಮೈಸೂರು ಮೂಲದ ಕಣ್ಣಪ್ಪ, ಸತೀಶ್ ಮತ್ತು ಸಂತೋಷ್ ಎನ್ನುವವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ತರೀಕೆರೆ ತಾಲೂಕಿನ ಕುಡ್ಲೂರು ಮತ್ತು ಕೊರಟೀಕೆರೆಯ ಇಬ್ಬರು ವ್ಯಕ್ತಿಗಳು ಸಹ ಈ ದಂಧೆಯಲ್ಲಿ ಭಾಗಿಯಾಗಿದ್ದು, ಬೆಳಕಿಗೆ ಬಂದಿದೆ ಅರೋಪಿಗಳಿಂದ ಮೂರು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕಳ್ಳಸಾಗಾಣಿಕೆದಾರರ ಜಾಲವು ಹಳ್ಳಿಗಳನ್ನು ಸಂಪರ್ಕಿಸಿ ಕಾಡುಪ್ರಾಣಿಗಳ ಚರ್ಮ, ಕೊಂಬು, ದಂತ ಸಂಗ್ರಹಿಸುವ ವ್ಯವಹಾರ ದಂದೆ ನಡೆಸುತ್ತಿದ್ದ ಆರೋಪ ಹೊಂದಿದ್ದು ಆರೋಪಿಗಳಿಂದ 4 ಕೆ.ಜಿ ದಂತವನ್ನ ವಶಕ್ಕೆ ಪಡೆದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಪ್ರಾಣಿಗಳ ಚರ್ಮ ಹಾಗೂ ಕೊಂಬು ಕೊಳ್ಳುವ ನೆಪದಲ್ಲಿ ಈ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅರಣ್ಯಾಧಿಕಾರಿಗಳು ಹೆಚ್ಚಿನ ತನಿಖೆ ನಡೆಸಿತ್ತಿದ್ದು.ಇನ್ನಷ್ಟು ಅನೆ ದಂತ ಸಂಗ್ರಹಿಸಿರುವ ಸಾಧ್ಯತೆ ಇದ್ದು. ಅವರ ಜಾಲಕ್ಕೆ ಅರಣ್ಯ ಸಿಬ್ಬಂದಿ ಬಲೆ ಬೀಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv