ನಾಳೆಯಿಂದ ‘ನಮ್ಮ ನಡಿಗೆ, ಚೆನ್ನಮ್ಮನ ನಾಡಿಗೆ’ ಪಾದಯಾತ್ರೆ

ಹರಿಹರ : ಕಿತ್ತೂರು ರಾಣಿ ಚೆನ್ನಮ್ಮ ಸಂಸ್ಥಾನದ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲು ಆಗ್ರಹಿಸಿ ಮೇ 31 ರಿಂದ ‘ನಮ್ಮ ನಡಿಗೆ, ಚೆನ್ನಮ್ಮನ ನಾಡಿಗೆ ಸದ್ಭಾವನಾ ಪಾದಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ವೀರರಾಣಿ ಕಿತ್ತೂರು ಚೆನ್ನಮ್ಮನ ಕರ್ಮ ಭೂಮಿ ಕಿತ್ತೂರು ಹಾಗೂ ಐಕ್ಯಸ್ಥಳ ಬೈಲಹೊಂಗಲದವರೆಗೆ ಪಾದಯಾತ್ರೆ ನಡೆಯಲಿದೆ. ಜಗದ್ಗುರು ವಚನಾನಂದ ಮಹಾಸ್ವಾಮಿ ಹಾಗೂ ಸದ್ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಾದಯಾತ್ರೆಯ ಉದ್ದೇಶವೇನು?
ಬೈಲಹೊಂಗಲದಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು. ಭಾರತ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ಎಂದು ಘೋಷಿಸಲು ಹಾಗೂ ಇತಿಹಾಸದಲ್ಲಿ ದಾಖಲಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಸೆಳೆಯುವುದು ಪಾದಯಾತ್ರೆಯ ಉದ್ದೇಶ. ಇದಲ್ಲದೇ ಸರ್ವಜನಾಂಗದ ಜನರಲ್ಲಿ ದೇಶ ಪ್ರೇಮವನ್ನು ಬಿತ್ತುವುದು. ಸರ್ವರನ್ನು ಯೋಗಯುಕ್ತ-ರೋಗಮುಕ್ತವನ್ನಾಗಿಸುವುದು. ಯುವಕರನ್ನು ದುಶ್ಚಟ -ದುರ್ಗುಣಗಳಿಂದ ದೂರ ಮಾಡುವುದು. ವೀರರಾಣಿ ಕಿತ್ತೂರು ಚೆನ್ನಮ್ಮ ಆಳಿದ ಕಿತ್ತೂರು ಕೋಟೆಯನ್ನು ಪುನರುಜ್ಜೀವನಗೊಳಿಸುವುದು ಕೂಡ ಪಾದಯಾತ್ರೆಯ ಉದ್ದೇಶವಾಗಿದೆ.
ಯಾತ್ರೆ ಸಾಗುವ ಮಾರ್ಗ
ಮೇ 31 ರಂದು ಸಂಜೆ 4ಗಂಟೆಗೆ ಪೀಠದಿಂದ ಆರಂಭವಾಗುವ ಯಾತ್ರೆಗೆ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಚಾಲನೆ ನೀಡಲಿದ್ದಾರೆ. ನಂತರ ನಗರದ ಶ್ರೀಹರಿಹರೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಪ್ರಮುಖ ರಸ್ತೆಗಳ ಮೂಲಕ ಸಮೀಪದ ಕುಮಾರಪಟ್ಟಣಂವರೆಗೆ ಸಾಗಿ ಅಲ್ಲಿ ಯಾತ್ರೆ ವಾಸ್ತವ್ಯ ಹೂಡಲಿದೆ. ಜೂನ್​ 1ರಂದು ರಾಣೆಬೆನ್ನೂರು, 2ರಂದು ಮೋಟೆಬೆನ್ನೂರು, 3ರಂದು ಹಾವೇರಿ, 4ರಂದು ಬಂಕಾಪುರು, 5ರಂದು ತಡಸ ಕತ್ರಿ, 6ರಂದು ಹುಬ್ಬಳ್ಳಿ, 7ರಂದು ಧಾರವಾಡ, 8ರಂದು ಕಿತ್ತೂರು ಸಂಸ್ಥಾನದ ಬೈಲಹೊಂಗಲಕ್ಕೆ ಯಾತ್ರೆ ತಲುಪಲಿದೆ.