‘ಗೆದ್ದವರಷ್ಟೇ ಪಕ್ಷ ಕಟ್ಟಿಲ್ಲ, ನಮ್ಮನ್ನೂ ಪರಿಗಣಿಸಿ’: ಪರಾಜಿತ ‘ಕೈ’ ಅಭ್ಯರ್ಥಿಗಳು

ಬೆಂಗಳೂರು: ಗೆದ್ದವರಷ್ಟೇ ಪಕ್ಷ ಕಟ್ಟಿಲ್ಲ, ನಮ್ಮನ್ನೂ ಪರಿಗಣಿಸಿ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟ ಪರಾಜಿತ ಅಭ್ಯರ್ಥಿಗಳು, ಸೋತವರ ಸಹಕಾರವೂ ಸಹ ಅತ್ಯಗತ್ಯ. ನಮ್ಮ ಸಹಕಾರ ಇಲ್ಲದೇ ಲೋಕಸಭಾ ಚುನಾವಣೆ ಗೆಲುವು ಅಷ್ಟು ಸುಲಭವಲ್ಲ. ಹಾಗಾಗಿ ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ನಮ್ಮನ್ನೂ ಪರಿಗಣಿಸಿ ಎಂದಿದ್ದಾರೆ.

ಅಲ್ಲದೇ, ಕೇವಲ ಈಗ ಗೆದ್ದಿರುವ ಶಾಸಕರನ್ನ ಮಾತ್ರ ಪರಿಗಣಿಸಿದ್ರೆ ಕಷ್ಟವಾಗುತ್ತೆ. ನಮಗೂ ಅವಕಾಶ ಕೊಟ್ಟಲ್ಲಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಸಾಧ್ಯವಾಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್​ಗೆ ಪರಾಜಿತ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಇನ್ನು ಸುದೀರ್ಘ ಮೂರೂವರೆ ತಾಸು ನಡೆದ ಸಭೆಯಲ್ಲಿ, ಪಕ್ಷ ಸಂಘಟನೆ, ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ, ಪಕ್ಷದೊಳಗಿನ ಗೊಂದಲ ನಿವಾರಣೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv