ಸತ್ತ ವ್ಯಕ್ತಿ ಬದುಕಿದಾಗ..!

ಕಲಬುರ್ಗಿ: ಉಸಿರು ನಿಂತ ಮೇಲೆ ಮತ್ತೆ ಉಸಿರು ಬರುತ್ತಾ..? ಸತ್ತು ಹೋದ ವ್ಯಕ್ತಿ ಮತ್ತೆ ಉಸಿರಾಟ ನಡೆಸಿದರೆ..? ಹೀಗೊಂದು ಪ್ರಶ್ನೆಯನ್ನ ನಿಮ್ಮನ್ನ ಯಾರಾದ್ರೂ ಕೇಳಿದ್ರೆ ಏನ್ ಉತ್ತರ ನೀಡ್ತೀರಾ.? ಅದೇನೇ ಇರಲಿ, ಕಲಬುರಗಿ ಜಿಲ್ಲೆಯಲ್ಲಿ ಪವಾಡ ಒಂದು ನಡೆದಿದೆ.
ವೈದ್ಯರು ಸತ್ತಿದ್ದಾನೆ ಅಂದರು..!
ಹೌದು, ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಸತ್ತು ಹೋಗಿದ್ದಾನೆ ಎಂದು ಭಾವಿಸಲಾಗಿದ್ದ ವ್ಯಕ್ತಿಯೊಬ್ಬರು ಅಂತ್ಯಕ್ರಿಯೆ ನಡೆಸುವ ಕೊನೆ ಕ್ಷಣದಲ್ಲಿ ಕಣ್ಣು ಬಿಟ್ಟು ಎಲ್ಲರ ಮುಖದಲ್ಲಿ ನಗು ಅರಳಿಸಿದ್ದಾನೆ! ಹೌದು, ಈಶ್ವರ್ ವಾವಡೆ ಸತ್ತು ಬದುಕಿ ಬಂದ ವ್ಯಕ್ತಿ. ಇವ್ರು ಥಾಣೆಯಲ್ಲಿರುವ ಖಾಸಗಿ ಕಂಪೆನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಗ್ಯ ಸರಿ ಇಲ್ಲದ ಕಾರಣ ಒಂದು ವಾರದ ಹಿಂದಷ್ಟೇ ತಮ್ಮ ಊರಿಗೆ ಬಂದಿದ್ದರು. ಚಿಕಿತ್ಸೆಗಾಗಿ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನ ಸೊಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ಈಶ್ವರ್ ಸತ್ತು ಹೋಗಿದ್ದಾನೆ ಎಂದು ಹೇಳಿದ್ದಾರೆ. ಹೀಗಾಗಿ ಈಶ್ವರ್ ಕುಟಂಬದವರು ಆತನ ಮೃತದೇಹವನ್ನ ತೆಗೆದುಕೊಂಡು ಬಂದಿದ್ದಾರೆ.
ಆಯಸ್ಸು ಗಟ್ಟಿ ಇತ್ತು..!
ಮನೆಗೆ ಮೃತ ದೇಹತಂದು ಅಂತ್ಯ ಸಂಸ್ಕಾರಕ್ಕಾಗಿ ವಿಧಿವಿಧಾನ ಮಾಡುತ್ತಿದ್ದರು. ದುಃಖ ಮಡುಗಟ್ಟಿ ಸಂಬಂಧಿಕರೆಲ್ಲಾ ಕಿರುಚಾಟ ನಡೆಸಿದಾಗ ಈಶ್ವರ್ ದಿಢೀರ್ ಅಂತಾ ಕಣ್ಣು ಬಿಟ್ಟಿದ್ದಾನೆ. ಅಲ್ಲದೇ ಅಸ್ವಸ್ಥ ಸ್ಥಿತಿಯಲ್ಲಿ ಉಸಿರಾಡುತ್ತಿರೋದು ಗೊತ್ತಾಗಿದೆ. ಇದರಿಂದ ಖುಷಿಯಾದ ಸಂಬಂಧಿಕರು ಕೂಡಲೇ ಕಲಬುರಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡುತ್ತಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv