‘ನನಗೆ ಮೂರು ಸಲ ಸಿಎಂ ಸ್ಥಾನ ತಪ್ಪಿದೆ, ಕೊನೆಗೆ ಬೇಕು-ಬೇಡಾ ಅಂತಾ ಡಿಸಿಎಂ ಆಗಿದ್ದೀನಿ’

ದಾವಣಗೆರೆ: ನನಗೆ ಮೂರು ಸಲ ಮುಖ್ಯಮಂತ್ರಿ ಪದವಿ ಕೈ ತಪ್ಪಿದೆ. ಕೊನೆಗೆ ಬೇಕು-ಬೇಡಾ ಅಂತಾ ಡಿಸಿಎಂ ಆಗಿದ್ದೀನಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಳಲು ತೋಡಿಕೊಂಡಿದ್ದಾರೆ. ನಗರದ ಶಿವಯೋಗಿ ಮಂದಿರದಲ್ಲಿ ನಡೆದ ಛಲವಾದಿ ಮಹಾಸಭೆಯ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುಖ್ಯಮಂತ್ರಿ ಸ್ಥಾನ ತಪ್ಪಿದೆ. ಸರ್ಕಾರದಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯ ಆಗುತ್ತಿದೆ. ಕಾನೂನಾತ್ಮಕ ಮೀಸಲಾತಿ ಕೊಟ್ಟಿದ್ದಾರೆ. ಆದರೆ ಬಡ್ತಿಯಲ್ಲಿ ಅನ್ಯಾಯ ಮಾಡಲಾಗಿದೆ. 7 ಜನ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಳಿತದ ವಿರುದ್ಧ ಹೋರಾಟ ಮಾಡಲು ನಾನು ಛಲವಾದಿ ಮಹಾಸಭೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಬಿ. ಬಸಲಿಂಗಪ್ಪ, ಕೆ.ಎಚ್.ರಂಗನಾಥ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಮಲ್ಲಿಕಾರ್ಜುನ್ ಖರ್ಗೆಯವರು ಒಂದು ಕಾಲು ಇಟ್ಟು ಹೊರ ತೆಗೆದರು. ಪ್ರತಿಯೊಬ್ಬ ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದರು.

ಪ್ರಪಂಚದ ಯಾವುದೇ ಭಾಗದಲ್ಲಿ ವರ್ಗೀಕರಣವಾಗಿಲ್ಲ. ಆದರೆ ಭಾರತದಲ್ಲಿ ಮಾತ್ರ ಮನುಷ್ಯ ಕುಲವನ್ನ ವರ್ಗೀಕರಣ ಮಾಡಿದ್ದು ಮಹಾಪರಾಧ. ಆಧುನಿಕ ಜಗತ್ತಿನಲ್ಲಿ ಬದಲಾವಣೆಯ ಸ್ವರೂಪ ಕಾಣಬೇಕು. ಸಮಾಜದಲ್ಲಿ ಬದಲಾವಣೆ ಕಾಣಬೇಕೆಂದು ಬುದ್ಧ, ಬಸವಣ್ಣ, ಅಂಬೇಡ್ಕರ್ ಹೋರಾಟ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕು ಎಂದು ಸಮಾನತೆ ಸಾರುವ ಸಂವಿಧಾನ ರೂಪಿಸಿದ್ರು. ಸಂವಿಧಾನಕ್ಕೆ ಯಾರು ಅಪಮಾನ ಮಾಡುತ್ತಾರೆ ಅವರು ದೇಶದ ಬಗ್ಗೆ ಅಭಿಮಾನ ಹೊಂದಿರುವುದಿಲ್ಲ. ಬಾಬಾಸಾಹೇಬ ಅಂಬೇಡ್ಕರ್ ಎಲ್ಲರಿಗೆ ಒಪ್ಪಿಗೆ ಯಾಗುವಂತಹ ಸಂವಿಧಾನ ನೀಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv   Facebook: firstnews.tv Twitter: firstnews.tv