ನಿಫಾ ವೈರಸ್ ಚಿಕಿತ್ಸೆ ಎಲ್ಲಾ ಆಸ್ಪತ್ರೆಗಳಲ್ಲೂ ನೀಡಬೇಕು: ಡಿಸಿ

ಉಡುಪಿ: ಸದ್ಯ ಕೇರಳ ರಾಜ್ಯದಲ್ಲಿ ಮಾರಣಾಂತಿಕವಾಗಿರುವ ನಿಫಾ ವೈರಸ್​ಗೆ ಇದೀಗ ರಾಜ್ಯದ ಜನರು ಕಂಗಾಲಾಗಿದ್ದಾರೆ. ಈ ವೈರಸ್ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ನಿಫಾ ವೈರಸ್ ನಿಯಂತ್ರಣ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿ, ಬಾವಲಿಗಳು ಕಚ್ಚಿದ ಹಣ್ಣಿನಿಂದ ಈ ರೋಗ ಹರಡಲಿದ್ದು, ಪಕ್ಷಿಗಳು ತಿಂದು ಮರದಿಂದ ಕೆಳಗೆ ಬಿದ್ದಿರುವ ಹಣ್ಣುಗಳನ್ನು ಸೇವಿಸದಂತೆ ಮಾಹಿತಿ ನೀಡಿದರು. ಅಲ್ಲದೇ ಹಣ್ಣುಗಳನ್ನು ತಿನ್ನುವಾಗ ನೀರಿನಿಂದ ತೊಳೆದು ತಿನ್ನಿ ಎಂದು ತಿಳಿಸಿದ್ರು.
ನಿಫಾ ಲಕ್ಷಣಗಳು ಕಂಡುಬಂದ್ರೆ ತಕ್ಷಣ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ
ತಮ್ಮಲ್ಲಿ ಬರುವ ಸಂಶಯಾಸ್ಪದ ನಿಫಾ ವೈರಸ್ ರೋಗಿಯ ವಿವರಗಳನ್ನು ಕೂಡಲೇ ಆಸ್ಪತ್ರೆಗಳು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಎಲ್ಲ ಆಸ್ಪತ್ರೆಗಳಲ್ಲೂ ನಿಫಾ ವೈರಸ್ ಸಂಬಂಧ ಚಿಕಿತ್ಸೆ ನೀಡಬೇಕು. ಅಲ್ಲದೆ ಸೋಂಕು ನಿಯಂತ್ರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.