‘ಚೆನ್ನಮ್ಮ ಖಡ್ಗ ಸ್ವಾತಂತ್ರ್ಯದ ಪ್ರತೀಕ, ಅದನ್ನು ಕೂಡಲೇ ಸರ್ಕಾರ ಪತ್ತೆ ಹಚ್ಚಬೇಕು’

ದಾವಣಗೆರೆ: ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸುತ್ತಿದೆ. ಆದರೆ, ಇದೊಂದು ಜಯಂತಿ ಅಲ್ಲ. ಇದು 195ನೇ ವಿಜಯೋತ್ಸವದ ಸಂಭ್ರಮಾಚರಣೆ ಎಂದು ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಜಿಲ್ಲಾಡಳಿತದ ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ವತಿಯಿಂದ ನಡೆದ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಜಯ ಗಳಿಸಿದ ದಿನ. ಇದನ್ನೇ ರಾಜ್ಯ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉತ್ಸವ ಎಂದು ಆಚರಿಸುತ್ತಿದೆ ಎಂದರು.

ಚೆನ್ನಮ್ಮನ ಜನ್ಮ ದಿನದ ಬಗ್ಗೆ ಹಲವು ಗೊಂದಲಗಳಿವೆ. ಅದರ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ. ಬೆಳಗಾವಿಯ ಕಿತ್ತೂರು ಪಟ್ಟಣ ರಾಷ್ಟ್ರೀಯ ಸ್ಮಾರಕವಾಗಬೇಕು. ದೇಶದ ಜನರು ಚೆನ್ನಮ್ಮನ ಬಗ್ಗೆ ಇತಿಹಾಸ ಓದುವಂತಾಗಬೇಕು. ರಾಣಿ ಚೆನ್ನಮ್ಮರ ಖಡ್ಗ ಸ್ವಾತಂತ್ರ್ಯದ ಪ್ರತೀಕವಾಗಿದ್ದು, ಅದು ಎಲ್ಲಿದೆ ಅನ್ನೋದೆ ಈವರೆಗೂ ಗೊತ್ತಾಗಿಲ್ಲ. ಅದನ್ನು ಹುಡುಕುವ ಕೆಲಸ ತ್ವರಿವಾಗಿ ಆಗಬೇಕು. ವೀರ ಮಾತೆ ಚೆನ್ನಮ್ಮರ ಇತಿಹಾಸ ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ದೇಶದ ಪ್ರಪ್ರಥಮ ಹೋರಾಟಗಾರ್ತಿ ಮಹಿಳೆ ಎಂದು ಇತಿಹಾಸದಲ್ಲಿ ದಾಖಲಾಗಬೇಕಿದೆ ಎಂದು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

 

 

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv