ಪ್ರೇಮಿಗಳ ದಿನದಂದೇ ಖಡಕ್ ಐಎಎಸ್ ಅಧಿಕಾರಿಗಳ ಮದುವೆ..!

ದಾವಣಗೆರೆ: ಇಬ್ಬರು ಖಡಕ್ ಐಎಎಸ್ ಅಧಿಕಾರಿಗಳು ಕಾನೂನು ಚೌಕಟ್ಟು ವಿಚಾರದಲ್ಲಿ ಯಾವತ್ತೂ ರಾಜೀಯಾದವರಲ್ಲ. ಒಂದೇ ಜಿಲ್ಲೆಯಲ್ಲಿದ್ದುಕೊಂಡು ಉತ್ತಮವಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಜೊತೆಗೆ ಇದ್ದರೂ ಇಬ್ಬರೂ ಪ್ರೇಮದ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಈ ಜೋಡಿ ಮದುವೆಗೆ ಸಜ್ಜಾಗಿದೆ.

ದಾವಣಗೆರೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ) ಅಶ್ವತಿ ಹಸೆಮಣೆ ಏರಲಿದ್ದಾರೆ. ಪ್ರೇಮಿಗಳ ದಿನದಂದೇ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿರುವುದು ವಿಶೇಷ.

ಈ ಹಿಂದಿನಿಂದಲೂ ಗೌತಮ್ ಹಾಗೂ ಅಶ್ವತಿಯವರ ನಡುವೆ ಪ್ರೀತಿ ಇತ್ತು ಎಂದು ತಿಳಿದುಬಂದಿದೆ. ಆದರೆ ಇಬ್ಬರೂ ಈ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಡಿಸಿ ಗೌತಮ್ ಆಂಧ್ರ, ಸಿಇಓ ಅಶ್ವತಿ ಕೇರಳದವರು..!

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಆಂಧ್ರಪ್ರದೇಶ ಮೂಲದವರು. ಸಿಇಓ ಅಶ್ವತಿ ಕೇರಳದವರು. ಇದೇ ಫೆ.14 ರಂದು ಬೆಳಗ್ಗೆ ಅಶ್ವತಿ ಅವರ ಊರು ಕೊಯಿಕೋಡ್‌ನ ಟಾಗೋರ್ ಹಾಲ್‌ನಲ್ಲಿ ವಿವಾಹ ನೆರವೇರಲಿದೆ. ಜಿಲ್ಲೆಗೆ ಮೊದಲು ಆಗಮಿಸಿದಾಗ ಅಶ್ವತಿ ಅವರು, ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಲು ಪಣತೊಟ್ಟು ಕೆಲಸ ನಿರ್ವಹಿಸಿದ್ದರು. ಉತ್ತಮ ಆಡಳಿತದಿಂದ ದಾವಣಗೆರೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಇನ್ನು ದಾವಣಗೆರೆ ಜಿಲ್ಲಾ ಪಂಚಾಯ್ತಿಗೆ ಅಶ್ವತಿ ಬಂದ ಬಳಿಕವಷ್ಟೇ ಗೌತಮ್ ಬಗಾದಿಯವರು ಜಿಲ್ಲೆಗೆ ಡಿಸಿಯಾಗಿ ಬಂದರು. ಜಿಲ್ಲಾಧಿಕಾರಿಯಾಗಿ ಬಂದ ಡಾ.ಗೌತಮ್ ಬಗಾದಿಯವರು ಕೂಡ ದಾವಣಗೆರೆಯಲ್ಲಿ ಉತ್ತಮ ಆಡಳಿತದ ಮೂಲಕ ಹೆಸರು ಗಳಿಸಿದ್ದಾರೆ. ಪ್ರತಿ ಸೋಮವಾರ ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗೆ ಪರಿಹಾರ ನೀಡ್ತಿದ್ದಾರೆ.

ಪ್ರೇಮಿಗಳ ದಿನದಂದೇ ಮದುವೆ..!

ಪ್ರೇಮಿಗಳ ದಿನದಂದು ಹೊಸ ಜೀವನಕ್ಕೆ ಕಾಲಿಡುತ್ತಿರುವ ಈ ನವ ಜೋಡಿಗೆ ಜಿಲ್ಲೆಯಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮಿಬ್ಬರ ಮಧ್ಯೆ ಪ್ರೀತಿ ಇದ್ದರೂ ಸಾರ್ವಜನಿಕ ಜೀವನದಲ್ಲಿ ಹೇಗೆ ಇರಬೇಕು ಎಂಬುದನ್ನು ಈ ಇಬ್ಬರೂ ಅಧಿಕಾರಿಗಳು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv