ಈ ಬಾರಿಯ ದಸರಾ ಡಿಫರೆಂಟ್​ ಆಗಿರಲಿ: ಸಿಎಂ ಹೆಚ್​ಡಿ ಕುಮಾರಸ್ವಾಮಿ

ಬೆಂಗಳೂರು: ವಿಶ್ವದಲ್ಲೇ ದಸರಾ ಉತ್ತಮ ಕಾರ್ಯಕ್ರಮ ಆಗಬೇಕೆಂಬ ಇಚ್ಛೆ ಎಲ್ಲರಿಗೂ ಇದೆ. ಪ್ರತಿ ವರ್ಷದ ಕಾರ್ಯಕ್ರಮಗಳಿಗಿಂತಲೂ ಬೇರೆಯಾಗಿ, ಹೊಸ ಕಾರ್ಯಕ್ರಮ ತರಲು ಸಿದ್ಧತೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು ‌ದಸರಾ ಆಚರಣೆಗೆ ಸಿದ್ಧತೆಯ ಪೂರ್ವಭಾವಿ ಸಭೆ‌ ಇಂದು ವಿಧಾನಸೌಧದಲ್ಲಿ‌ ನಡೆಯಿತು. ಈ ವೇಳೆ ಮಾತನಾಡಿದ ಸಿಎಂ ಕುಮಾರ ಸ್ವಾಮಿ, ಅಕ್ಟೋಬರ್​ನಲ್ಲಿ ದಸರಾ ನಡೆಸಲು ನಿರ್ಧರಿಸಿದ್ದು, ಪೂರ್ವ ಸಿದ್ದತಾ ಸಭೆ ನಡೆಸುತ್ತಿದ್ದೇವೆ. ಆಷಾಡ ಮಾಸ ಆರಂಭಕ್ಕೂ ಮೊದಲೇ ಪೂರ್ವಸಿದ್ದತಾ ಸಭೆ ನಡೆಸಬೇಕೆಂದು ಜಿ.ಟಿ. ದೇವೇಗೌಡರು ನಿರ್ಧರಿಸಿದ್ರು ಎಂದರು. ಅಲ್ಲದೇ, ಮೂರೂ ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳು ದಸರಾ ಕಾರ್ಯಕ್ರಮ ನಡೆಸಬೇಕು. ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಶಾಸಕರು ಮತ್ತು ಸಚಿವರ ನೇತೃತ್ವದಲ್ಲಿ ಸಮಿತಿ ಮಾಡಿಕೊಳ್ಳೊದು ಉತ್ತಮ. ಪಾಸ್ ಸೇರಿದಂತೆ ಯಾವುದೇ ರೀತಿಯ ಗೊಂದಲ ಆಗದಂತೆ ಸಮಿತಿ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.

ಇನ್ನು ಮೈಸೂರು, ಮಂಡ್ಯ, ಚಾಮರಾಜನಗರವನ್ನು ವಿಶ್ವದ ಪ್ರವಾಸೋದ್ಯಮ ಕೇಂದ್ರ ಮಾಡಲು ಸರ್ಕಾರ ನಿರ್ಧರಿಸಿದೆ. ಮೈಸೂರು ಪಕ್ಕ ಮಡಿಕೇರಿ, ಬಂಡೀಪುರ, ನಾಗರಹೊಳೆ ಸೇರಿದಂತೆ ಹಲವು ತಾಣಗಳಿವೆ. ಸರ್ಕಾರದಿಂದ ದಸರಾಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಕಳೆದ ಬಾರಿ ನಿಗದಿಯಾದ ಹಣದಲ್ಲಿ ಸ್ವಲ್ಪ ಹಣ ಇನ್ನು ಬಿಡುಗಡೆ ಆಗಿಲ್ಲ ಎಂದು ತಿಳಿಸಿದ್ದಾರೆ. ಬಾಕಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಶಾಸಕರು ಸಹ ಜವಾಬ್ದಾರಿ ಯಿಂದ ಕೆಲಸ ಮಾಡಬೇಕು. ಗ್ರಾಮೀಣ ಭಾಗದ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ‌ದಸರಾ ಪೂರ್ವಭಾವಿ ಸಭೆ‌ಯಲ್ಲಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರಾಥಮಿಕ ‌ಹಾಗೂ ಪ್ರೌಢ ಶಿಕ್ಷಣ ‌ಸಚಿವ ಎನ್. ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ‌ಸಚಿವ ಸಿ.ಎಸ್.ಪುಟ್ಟರಂಗಶೆಟ್ಟಿ, ಕನ್ನಡ ‌ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲ, ಶಾಸಕರಾದ ಎಚ್ ವಿಶ್ವನಾಥ್, ಯತೀಂದ್ರ ಸೇರಿದಂತೆ ಆ ಭಾಗದ ಶಾಸಕರು ಭಾಗಿಯಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv