ನಾವೇನು ರೈತ್ರಾ ಅಂತಾ ಕೇಳೋರು ಒಂದೇ ಒಂದು ಲೋಟ ಹಾಲು ಕರೆಯಲಿ: ಸಿಎಂಗೆ ದರ್ಶನ್ ಸವಾಲ್

ಮಂಡ್ಯ: ಸುಮಲತಾ ಪರ ಪ್ರಚಾರ ನಡೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ ಭಾಷಣದುದ್ದಕ್ಕೂ ದೇವೇಗೌಡರ ಕುಟುಂಬದ ವಿರುದ್ಧ ಗುಡುಗಿದರು. ಅದ್ರಂತೆ ಈ ಹಿಂದೆ ಸಿಎಂ ಕುಮಾರಸ್ವಾಮಿ, ‘ಜೊಡೆತ್ತುಗಳು ಕಳ್ಳ ಎತ್ತುಗಳು. ಅವರಿಗೆ ರೈತರ ಸಮಸ್ಯೆ ಏನು ಗೊತ್ತು’ ಅಂತಾ ರಾಕಿಂಗ್ ಸ್ಟಾರ್ ಯಶ್​ ಹಾಗೂ ದರ್ಶನ್ ಅವ್ರನ್ನ ಕೇಳಿದ್ದರು.

ಇದಕ್ಕೆ ಇಂದು ಉತ್ತರ ನೀಡಿದ ದರ್ಶನ್, ಅವ್ರೇನು ರೈತರಾ ಅಂತಾ ಸಿಎಂ ನಮ್ಮ ಬಗ್ಗೆ ಹೇಳ್ತಾರೆ. ರೈತರ ಕಷ್ಟ ಅವ್ರಿಗೇನು ಗೊತ್ತು ಎಂದು ಕೇಳುತ್ತಾರೆ. ನಮ್ಮನ್ನ ಪ್ರಶ್ನೆ ಮಾಡೋರು ಒಂದು ಲೋಟ ಹಾಲು ಕರೆಯಲಿ. ಒಂದೇ ಒಂದು ಲೋಟ ಹಾಲು ಕರೆಯಲಿ, ಜಾಸ್ತಿ ಬೇಡ ಎಂದರು.

ಹಸು ಕರು ಹಾಕುತ್ತೆ. ಹತ್ತು ದಿನ ಹಸುವಿಗೆ ಏನ್ ಮೇವು ಹಾಕಬೇಕು ಅಂತಾ ಅವ್ರನ್ನ ಕೇಳಿ. ನನಗೆ ರೈತ ಅಂತಾ ಹೇಳಿಕೊಳ್ಳೋಕೆ ಇಷ್ಟ. ರೈತರ ಕಷ್ಟ ಗೊತ್ತಿಲ್ಲ ಅಂತಾ ನಮ್ಗೆ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಡಿದ್ದನ್ನ ಯಾವತ್ತೂ ಹೇಳಿಕೊಳ್ಳಬಾರದು, ನಾವೆಲ್ಲರೂ ಕಲಾವಿದರು. ಕಲಾವಿದನಾಗಿ ನನಗೆ ವರ್ಷಕ್ಕೆ 2.5 ಕೋಟಿ ಹಣ ಬೇಕು. ದಿನ ಮನೆ ಮುಂದೆ ನೂರಾರು ಮಂದಿ ಬಂದು ನಿಲ್ಲುತ್ತಾರೆ. ಅಂಗವಿಕಲರು, ಬಡವರು, ರೋಗಿಗಳು, ಭಿಕ್ಷುಕರು ಬರುತ್ತಾರೆ. ಅವರಿಗೆಲ್ಲಾ ಇಲ್ಲ ಅಂತಾ ಹೇಳೋಕೆ ಆಗಲ್ಲ. ಅದೆಲ್ಲಾ ನನ್ನ ಸ್ವಂತ ಹಣ. ಇದೇ ದುಡ್ಡನ್ನ ಅನುದಾನ ಅಂತಾ ಕೊಟ್ಟು ಬಿಡಲಿ, ಮಿಕ್ಕಿದ್ದು ನಾವು ನೋಡಿಕೊಳ್ಳುತ್ತೇವೆ. ಅನುದಾನ, ಅನುದಾನ ಅಂತಾ ಹೇಳುತ್ತಾರೆ, ಆ ಅನುದಾನವನ್ನ ನಮ್ಮ ಕೈಗೆ ಕೊಟ್ಟು ನೋಡಲಿ. ಹೇಗೆ ಮಾಡಬೇಕು ಅನ್ನೋದನ್ನ ನಾವು ತೋರಿಸುತ್ತೇವೆ ಎಂದು ತಿವಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv