ಕುರುಕ್ಷೇತ್ರ ಮಂದಿ ಇನ್ನೂ ಸುಮ್ಮನಿರೋದಿಲ್ವಂತೆ..!! ಏನ್ಮಾಡ್ತಾರಂತೆ ಗೊತ್ತಾ..?

ಚಂದನವನದ ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಕುರುಕ್ಷೇತ್ರ’ ಚಿತ್ರವೂ ಒಂದು. ಬಹುತಾರಾಗಣದ ಬಹುಕೋಟಿ ವೆಚ್ಚದ ಅದ್ರಲ್ಲೂ ತಾಂತ್ರಿಕತೆಯಲ್ಲಿ ಒಂದು ಹೆಜ್ಜೆ ಮುಂದೇ ಅಡಿಯಿಟ್ಟು 3ಡಿಯಲ್ಲಿ ಬಿಡುಗಡೆಯಾಗಲಿರೋ ಸಿನಿಮಾ ಅದ್ಯಾವಾಗ ರಿಲೀಸ್ ಆಗುತ್ತೋ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ಕುರುಕ್ಷೇತ್ರದ 2ಡಿ ಅವರತಣಿಕೆ ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಹೌದು, ಈ ಮೂಲಕ ಕುರುಕ್ಷೇತ್ರ ಆದಷ್ಟು ಬೇಗನೆ ತೆರೆಗೆ ಬರುವುದು ಖಚಿತವಾಗಿದೆ. ಇಷ್ಟು ದಿನ ಕುರುಕ್ಷೇತ್ರದ ದುರ್ಯೋಧನ ಥಿಯೇಟರ್ ಪರದೆ ಮೇಲೆ ವಿಜೃಂಭಿಸೋ ಕ್ಷಣಕ್ಕಾಗಿ ಕಾಯುತ್ತಿದ್ದ ಚಿತ್ರರಸಿಕರ ಮನ ಬೇಗನೆ ತಣಿಯಲಿದೆ. ಅಂದಹಾಗೆ ಕುರುಕ್ಷೇತ್ರ 3ಡಿಯಲ್ಲು ಬಿಡುಗಡೆಗೊಳ್ಳಲಿದೆ.
ಈವಾಗ ಸೆನ್ಸಾರ್‌ ಆಗುತ್ತೆ, ಆವಾಗಾಗುತ್ತೆ ಅಂತಾ ಕಾದಿದ್ದು ಮುಗೀತು..!
ಕುರುಕ್ಷೇತ್ರ ಶೂಟಿಂಗ್ ಕಂಪ್ಲೀಟ್ ಆಗೇಹೋಯ್ತು. ಸೆನ್ಸಾರ್ ಈಗ ಆಗುತ್ತೆ, ಅವಾಗ ಆಗುತ್ತೆ ಅನ್ನೋ ಸುದ್ದಿ ಸಾಕಷ್ಟು ಬಾರಿ ಕೇಳಿಬಂದಿತ್ತು. ಆದ್ರೆ, ಈ ಬಾರಿ ಚಿತ್ರ ಸೆನ್ಸಾರ್‌ಗೆ ಪಕ್ಕಾ ರೆಡಿ ಇದೆ. ದರ್ಶನ್ ಸೇರಿ ಎಲ್ಲಾ ಡಬ್ಬಿಂಗ್ ವರ್ಕ್​​​​ ಕೂಡ ಮುಗಿದಿದೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ಸದ್ಯ 2 ಡಿ ಆವೃತ್ತಿಯ ಸಂಕಲನದ ಕೆಲಸಗಳು ಮುಗಿದದ್ದು, ಜೊತೆಗೆ 3ಡಿ ‘ಕುರುಕ್ಷೇತ್ರ’ದ ಶೇ. 70 ಭಾಗ ಕೆಲಸ ಮುಗಿದಿದೆ. ಕೆಲವೇ ದಿನಗಳಲ್ಲಿ ಸೆನ್ಸಾರ್ ಮಂಡಳಿಯಲ್ಲಿಯೂ 2ಡಿ ಕಾಪಿ ಪ್ರದರ್ಶನ ಕಾಣಲಿದೆ. ಎಲ್ಲ ಅಂದುಕೊಂಡಂತಾದ್ರೆ, ಕೆಲ ದಿನಗಳಲ್ಲೇ ಸಿನಿಮಾ ರಿಲೀಸ್‌ ದಿನಾಂಕವನ್ನು ನಿರ್ಮಾಪಕ ಮುನಿರತ್ನ ಘೋಷಿಸಿಯೂ ಬಿಡ್ತಾರೆ.
ಕುರುಕ್ಷೇತ್ರ ರಿಲೀಸ್ ಲೇಟಾಗುತ್ತಿರೋಕೆ ಏನು ಕಾರಣ?
ಕುರುಕ್ಷೇತ್ರ ಗ್ರಾಫಿಕ್ ಮೇಲೆ ನಿಂತಿರುವ ಸಿನಿಮಾ. ಕೋಟ್ಯಾಂತರ ರೂ ಬಂಡವಾಳ ಹೂಡಿ , ಹೇಗೆಂದರೆ ಹಾಗೆ ತೆರೆಗೆ ತರಲು ನನಗಿಷ್ಟವಿಲ್ಲ, ತಡವಾದಾರುಪರವಾಗಿಲ್ಲ , ಚಿತ್ರ ಪ್ರೇಮಿಗಳಿಗೆ ಇಷ್ಟವಾಗುವಂತೆಯೇ ಸಿನಿಮಾವನ್ನ ರಿಲೀಸ್ ಮಾಡುತ್ತೇನೆ ಅಂತಾ ನಿರ್ಮಾಪಕ ಮುನಿರತ್ನ ಅವರು ಹೇಳಿದ್ದಾರೆ.
ಇದು ಅಂತಿಂಥಾ ಕುರುಕ್ಷೇತ್ರ ಅಲ್ಲ..!
ಹೇಳಿ ಕೇಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ. ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್‌ ಅವರೂ ನಟಿಸಿದ್ದಾರೆ. ಬಾಹುಬಲಿ’ಗಾಗಿ ಕೆಲಸ ಮಾಡಿದ ತಂತ್ರಜ್ಞರೇ ‘ಕುರುಕ್ಷೇತ್ರ’ಕ್ಕೂ ಕೆಲಸ ಮಾಡಿದ್ದು, ವಿ.ಎಫ್.ಎಕ್ಸ್ ಎಫೆಕ್ಟ್ ಅಂತೂ, ತೆರೆಯ ಮೇಲೊಂದು ಜಾದೂ ಮಾಡಲಿದೆ. ಈಗಾಗಲೇ ರಿಲೀಸಾಗಿರೋ ಟೀಸರ್​ಗಳು, ಮೇಕಿಂಗ್ ಝಲಕ್‍ಗಳು ಈ ಚಿತ್ರ ಯಾವ ಮಟ್ಟಕ್ಕಿರಲಿದೆ ಎಂಬುದಕ್ಕೆ ಸುಳಿವು ನೀಡಿವೆ. ವೃಷಭಾದ್ರಿ ಪ್ರೊಡಕ್ಷನ್‍ನಲ್ಲಿ ಮುನಿರತ್ನ ನಿರ್ಮಾಣದಲ್ಲಿ, ನಾಗಣ್ಣ ನಿರ್ದೇಶನದಲ್ಲಿ ದೃಶ್ಯರೂಪಕ್ಕಿಳಿದಿರೋ ಪೌರಾಣಿಕ ‘ಕುರುಕ್ಷೇತ್ರ’ ಚಿತ್ರ 2 ಡಿ ಹಾಗೂ 3 ಡಿ ಆವೃತ್ತಿಯಲ್ಲಿ ಮೂಡಿ ಬರಲಿದೆ. ಚಿತ್ರದಲ್ಲಿ ದರ್ಶನ್, ಅಂಬರೀಶ್, ರವಿ ಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಹರಿಪ್ರಿಯಾ, ಮೇಘನಾ ರಾಜ್, ಸೋನು ಸೂದ್, ಸೇರಿ ಇನ್ನೂ ಹತ್ತಾರು ಕಲಾವಿದರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಲಹರಿ ಆಡಿಯೋ ಕಂಪನಿ ಹಾಡಿನ ಹಕ್ಕುಗಳನ್ನು ಪಡೆದುಕೊಂಡಿದೆ.ಇಂತಹ ಸಿನಿಮಾ ಯಾವಾಗ ತೆರೆಕಾಣಲಿದೆ ಅನ್ನೋದೇ ಸದ್ಯದ ಪ್ರಶ್ನೆ..?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv