ಬಡವರ ಈ ಫಾಲ್ಸ್​ ಕಾಯಿಲೆ ಗುಣಪಡಿಸೋ​ ಸಂಜೀವಿನಿಯೂ ಹೌದು..!

ಬಾಗಲಕೋಟೆ: ದಮ್ಮೂರು ಫಾಲ್ಸ್​ ಮಳೆ ಬಂದ್ರೆ ಸಾಕು ಈ ಮಿನಿ ಜಲಪಾತದ ವೈಭವ ನೋಡುಗರ ಕಣ್ಮನ ಸೆಳೆಯುತ್ತೆ. ಸಾಲದ್ದಕ್ಕೆ ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮ ರೋಗ ಗುಣಮುಖವಾಗುತ್ತೆ ಅನ್ನೋ ನಂಬಿಕೆ ಇಲ್ಲಿನ ಜನರದ್ದು. ಹೀಗಾಗಿ ಮಳೆಗಾಲ ಶುರುವಾದ್ರೆ ಸಾಕು ನಿತ್ಯವೂ ಇಲ್ಲಿಗೆ ನೂರಾರು ಪ್ರವಾಸಿಗರು ಬಂದು ಸ್ನಾನ ಮಾಡಿ ಎಂಜಾಯ್ ಮಾಡ್ತಾರೆ. ಹೀಗೆ ಹಾಲ್ನೊರೆಯಂತೆ ಬೀಳುತ್ತಿರೋ ನೀರು, ನೀರಿನ ಬುಡದಲ್ಲಿ ಕುಳಿತು ಸ್ನಾನ ಮಾಡ್ತಿರೋ ಜನ, ರೋಗಗಳಿಂದ ಮುಕ್ತಿ ಹೊಂದೋಕೆ ರಾಮಬಾಣದಂತಿರೋ ಮಿನಿ ಜಲಪಾತ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ದಮ್ಮೂರು ಗ್ರಾಮದಲ್ಲಿದೆ ಈ ಫಾಲ್ಸ್​. ದಮ್ಮೂರು ಗ್ರಾಮದ ಹೊರವಲಯದಲ್ಲಿರೋ ದಿಡಿಗಿನ ಬಸವೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ಬೆಟ್ಟದ ಮಧ್ಯೆ ವಿವಿಧ ಗಿಡಗಂಟೆಗಳ ಬೇರುಗಳ ಮಧ್ಯೆ ನುಸುಳಿ ಬರೋ ನೀರು ಮಿನಿ ಜಲಪಾತವಾಗಿ ಮೈದುಂಬಿ ಹರಿಯುತ್ತೆ. ಹೀಗೆ ಹರಿಯುವ ನೀರಿಗೆ ಈ ಭಾಗದಲ್ಲಿ ವಿಶೇಷ ಐತಿಹ್ಯವಿದೆ. ಗಿಡಗಳ ಬೇರುಗಳ ಮಧ್ಯೆ ನೀರು ಬರೋದ್ರಿಂದ ಈ ನೀರಿಗೆ ಔಷಧೀಯ ಗುಣ ಇರುತ್ತೆ. ಹೀಗಾಗೆ ಇಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣಮುಖವಾಗ್ತಾವೆ ಅನ್ನೋ ನಂಬಿಕೆ ಇಲ್ಲಿನ ಜನರದ್ದು.
ಇನ್ನು ಇತ್ತ ದೂರದ ಊರುಗಳಿಂದ ಈ ಮಿನಿ ಜಲಪಾತ ನೋಡೋಕೆ ಫ್ಯಾಮಿಲಿ ಸಮೇತ ಜನ ಆಗಮಿಸ್ತಾರೆ. ಹೀಗಾಗಿ ದಿನ ಬೆಳಗಾದ್ರೆ ಸಾಕು ಈ ದಮ್ಮೂರು ಗ್ರಾಮದ ಜಲಪಾತದಲ್ಲಿ ಜನ್ರು ಸ್ನಾನ ಮಾಡೋಕೆ ಮುಗಿಬೀಳ್ತಾರೆ. ಚಿಕ್ಕ ಮಕ್ಕಳು, ಮಹಿಳೆಯರು, ಯುವತಿಯರು, ಯುವಕರು ಹೀಗೆ ವಯಸ್ಸಿನ ಭೇದವಿಲ್ಲದೆ ಜನರು ಇಲ್ಲಿ ಸ್ನಾನ ಮಾಡಿ ಎಂಜಾಯ್ ಮಾಡ್ತಾರೆ.
ಸ್ನಾನದ ಬಳಿಕ ಬಸವೇಶ್ವರನ ದರ್ಶನ ಪಡೆದು ಹೋಗ್ತಾರೆ. ಈ ಮಧ್ಯೆ, ಮಳೆಯಿಂದ ನಿರ್ಮಾಣವಾಗೋ ಈ ದಮ್ಮೂರು ಫಾಲ್ಸ್ ನೀರು ಹರಿದು ಹೋಗಿ ಪಕ್ಕದಲ್ಲಿರೋ ಕೆರೆಗೆ ಸೇರುತ್ತೆ. ಅಲ್ಲದೇ ಮಳೆ ಹೆಚ್ಚಾದಂತೆ ಕೆರೆಗೆ ಹೆಚ್ಚಿನ ನೀರು ಬರುತ್ತಿದ್ದು, ಈ ಗ್ರಾಮದ ನೀರಾವರಿಗೂ ಸಹಾಯಕವಾಗಿದೆ. ಒಟ್ನಲ್ಲಿ ಇದೊಂದು ಬಡವರ ಫಾಲ್ಸ್ ಆಗಿ ಮಾರ್ಪಾಡಾಗಿದೆ ಅಂತಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv