ಮಹಾಮಳೆ ಅನಾಹುತಕ್ಕೆ ಕಾಲುವೆ ಒತ್ತುವರಿ ಕಾರಣವಾಯ್ತಾ?

ದಕ್ಷಿಣ ಕನ್ನಡ: ಮಹಾಮಳೆಗೆ ಜಿಲ್ಲೆ ಜಲಾವೃತಗೊಂಡಿದ್ದರ ಕಾರಣ ಏನು ಅಂತಾ ಮೂರು ದಿನಗಳಲ್ಲಿ ವರದಿ ನೀಡುವಂತೆ ಮಹಾನಗರ ಪಾಲಿಕೆಯ ಕಮಿಷನರ್​ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಮಾಡಿದ್ದಾರೆ.

ಮೂರು ದಿನಗಳ ಹಿಂದಿನ ಮಹಾ ಮಳೆಗೆ ದಕ್ಷಿಣ ಕನ್ನಡ ತತ್ತರಿಸಿ ಹೋಗಿತ್ತು. ಜಿಲ್ಲೆಯ ಅಳಕೆ, ಕುದ್ರೋಳಿ, ಕೊಟ್ಟಾರ, ಜೆಪ್ಪಿನಮೊಗರು ಪ್ರದೇಶಗಳು ಜಲಾವೃತಗೊಂಡಿತ್ತು. ಇದೀಗ ಮಳೆ ಕಡಿಮೆಯಾಗಿ ಎರಡು ದಿನ ಕಳೆದರೂ, ಜೆಪ್ಪಿನಮೊಗರು ಪ್ರದೇಶದಲ್ಲಿ ಇನ್ನೂ ನಿಂತ ನೀರು ಇಳಿದಿಲ್ಲ. ಅಲ್ಲಿನ 50ಕ್ಕೂ ಹೆಚ್ಚು ಮನೆಗಳು ಮಳೆ ನೀರಿನಲ್ಲಿಯೇ ತೇಲುವಂತಾಗಿದೆ. ಅದೇ ಪರಿಸರದ ಪ್ರಾಥಮಿಕ ಶಾಲೆಯ ಸುತ್ತ ಜಲಾವೃತ ಆಗಿರುವುದರಿಂದ ಮಕ್ಕಳು ಶಾಲೆಗೆ ಬರದಂತಾಗಿದೆ.

ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟಿಕೊಂಡಿದ್ದರಿಂದಲೇ ಇಂಥ ಪರಿಸ್ಥಿತಿಗೆ ಕಾರಣ ಅಂತಾ ತಿಳಿದುಬಂದಿದ್ದು. ಇದನ್ನು ಸ್ವತಃ ಜಿಲ್ಲಾಧಿಕಾರಿಯವರೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್​, ಯಾವುದೇ ಅಕ್ರಮ ಒತ್ತುವರಿ ಇದ್ದರೂ ಮುಲಾಜಿಲ್ಲದೆ ಕ್ರಮ ಜರಗಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ವರದಿ ನೀಡುವಂತೆ ಮಹಾನಗರ ಪಾಲಿಕೆಯ ಕಮಿಷನರ್​ಗೆ ಆದೇಶ ನೀಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv