ಬಿಲ್​ ಕೇಳಿದ್ದಕ್ಕೆ ಹೊಟೇಲ್​ನಲ್ಲಿ ಗೂಂಡಾಗಿರಿ

ಹುಬ್ಬಳ್ಳಿ: ಹೊಟೇಲ್​​ಗೆ ಊಟಕ್ಕೆ ಬಂದಿದ್ದ ಕಿಡಿಗೇಡಿಗಳು ಕ್ಷುಲ್ಲಕ ಕಾರಣಕ್ಕೆ ಹೊಟೇಲ್​ ಮಾಲೀಕ ಮತ್ತು ಕೆಲಸಗಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿ ಹಳೇ ಬಸ್​​ ನಿಲ್ದಾಣದ ಬಳಿ ಇರುವ ಬ್ರಹ್ಮಶ್ರೀ ಹೊಟೇಲ್​ನಲ್ಲಿ ನಡೆದಿದೆ.
ಊಟದ ಬಿಲ್​​ ಕೇಳಿದ್ದಕ್ಕೆ, ಕಳಪೆ ಊಟ ನೀಡಿದ್ದಿರಿ ಎಂದು ಜಗಳ ತೆಗೆದ ಗುಂಪು ನಂತರ ಹೊಟೇಲ್​​ ಮಾಲೀಕ ನಾರಾಯಣ ಶೆಟ್ಟಿ ಹಾಗೂ ಕೆಲಸಗಾರರ ಮೇಲೆ ಹೆಲ್ಮೆಟ್​​ನಿಂದ ಹಲ್ಲೆ ನಡೆಸಿದೆ. ಈ ವೇಳೆ ಕೆಲಸಗಾರ ಪ್ರಕಾಶ್​​ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಪ್ರಕಾಶ್​​ರಿಗೆ ಕಿಮ್ಸ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟಕ್ಕೆ ಸುಮ್ಮನಾಗದ ಪುಂಡರ ಗುಂಪು ಹೊಟೇಲ್​​ನಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಸಹ ದ್ವಂಸಗೊಳಿಸಿದೆ. ಘಟನೆ ಸಂಬಂಧ ಉಪನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.