ಬಾಬಾ ರಾಮ್​ಪಾಲ್ ಆಶ್ರಮದಲ್ಲಿ ಕೊಲೆ ಪ್ರಕರಣ: ಇಂದು ತೀರ್ಪು ಪ್ರಕಟ

ಚಂಡೀಗಢ: ಕೊಲೆ ಹಾಗೂ ದೇಶ ದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿರುವ ಹರಿಯಾಣದ ಸ್ವಯಂ ಘೋಷಿತ ದೇವಮಾನವ, ಸತ್​ಲೋಕ್​ ಆಶ್ರಮದ ಮುಖ್ಯಸ್ಥ ಬಾಬಾ ರಾಮ್​ಪಾಲ್​ ಪ್ರಕರಣದ ತೀರ್ಪು ಇಂದು ಹೊರಬೀಳಲಿದೆ. ಹಿಸಾರ್​ ಕೋರ್ಟ್​ ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ಪಂಜಾಬ್​ನಿಂದ ತಿಸಾರ್​ಗೆ ಹೋಗುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. 2006ರಲ್ಲಿ ಸತ್​ಲೋಕ್ ಆಶ್ರಮದಲ್ಲಿ ನಡೆದ ಕೊಲೆ, ವಂಚನೆ ಕೇಸ್​ಗಳಿಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿತನಾಗಿ 2014 ರಿಂದ ಬಾಬಾ ರಾಮ್​ಪಾಲ್​ ಜೈಲುವಾಸ ಅನುಭವಿಸುತ್ತಿದ್ದಾರೆ. ಇನ್ನು, 2014ರಲ್ಲಿ ರಾಮ್​ಪಾಲ್​ನನ್ನು ಬಂಧಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಸುಮಾರು 15,000 ಆಶ್ರಮದ ಭಕ್ತರು ಅಡ್ಡಿಪಡಿಸಿದ್ದರು. ಈ ಎಲ್ಲಾ ಘಟನೆಗಳಿಗೆ ಸಂಬಂಧಿಸಿದಂತೆ ರಾಮ್​ಪಾಲ್ ವಿರುದ್ಧ ದೂರು ದಾಖಲಾಗಿದ್ದು ಇಂದು ತೀರ್ಪು ಪ್ರಕಟವಾಗಲಿದೆ.

ಏನಿದು ಪ್ರಕರಣ?

2014ರ ನವೆಂಬರ್​ 14ರಂದು, ಬಾರ್ವಾಲಾದ ಸತ್​​ಲೋಕ್​ ಆಶ್ರಮದಲ್ಲಿ 4 ಮಹಿಳೆಯರು ಹಾಗೂ ಒಂದು ಮಗು ಸಾವನ್ನಪ್ಪಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಮ್​ಪಾಲ್ ಹಾಗೂ ಅವರ 27 ಭಕ್ತರ ಮೇಲೆ ಕೊಲೆ ಹಾಗೂ ಅಕ್ರಮ ಬಂಧನದ ಆರೋಪದಡಿ ಕೇಸ್​ ದಾಖಲಾಗಿತ್ತು. ಬಳಿಕ ರಾಮ್​ಪಾಲ್ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಘರ್ಷಣೆಯಾಗಿ, ಪೊಲೀಸರು ರಾಮ್​ಪಾಲ್​​ರನ್ನು ಬಂಧಿಸಿದ್ದರು. ಹಾಗೇ ನವೆಂಬರ್​ 18ರಂದು ಆಶ್ರಮದಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದಾಗ ರಾಮ್​ಪಾಲ್​ ಹಾಗೂ ಭಕ್ತರ ವಿರುದ್ಧ ಎರಡನೇ ಕೇಸ್​ ದಾಖಲಾಗಿತ್ತು. ಈ ಪ್ರಕರಣಗಳ ವಿಚಾರಣೆ ವೇಳೆ,  ಸಂತ್ರಸ್ತರ ಪೋಸ್ಟ್​ ಮಾರ್ಟಮ್​​ ನಡೆಸಿದ್ದ ವೈದ್ಯರು ಸೇರಿದಂತೆ ಒಟ್ಟು 80 ವಿಟ್​​ನೆಸ್​​ಗಳು ಕೋರ್ಟ್​​ಗೆ ಹಾಜರಾಗಿದ್ದರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv