‘ಬೆಳೆ ಸಮೀಕ್ಷೆ ಕಾರ್ಯ ಇತರೆ ಇಲಾಖೆಗಳಿಗೂ ಹಂಚಿಕೆ ಆಗಬೇಕು’

ಶಿರಸಿ: ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೋಟಗಾರಿಕಾ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಜವಾಬ್ದಾರಿಯನ್ನು ಇತರ ಇಲಾಖೆಗಳಿಗೂ ಹಂಚಬೇಕು ಎಂದು ಜಂಟಿ ಇಲಾಖೆ ಅಧಿಕಾರಿಗಳು ಉಪವಿಭಾಗಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಕುರಿತಂತೆ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಅವರಿಗೆ ಮನವಿ ನೀಡಿ ವಿನಂತಿಸಿದ ಜಂಟಿ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಈಗಾಗಲೇ ಸಾಕಷ್ಟು ಇಲಾಖಾ ಕಾರ್ಯಗಳಿವೆ. ಇದರ ಜೊತೆ ಹೆಚ್ಚುವರಿಯಾಗಿ ಬೆಳೆ ಸಮೀಕ್ಷೆ ಕಾರ್ಯವನ್ನೂ ನೀಡಿರುವುದು ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನೆಡೆಗೆ ಕಾರಣವಾಗಿದೆ. ತೋಟಗಾರಿಕಾ ಇಲಾಖೆಯಿಂದ ಸಮಗ್ರ ತೋಟಗಾರಿಕಾ ಅಭಿವೃದ್ಧಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮುಂತಾದ 50ಕ್ಕೂ ಹೆಚ್ಚು ಯೋಜನೆಗಳು ಅನುಷ್ಠಾನ ಆಗುತ್ತಿವೆ. ಫಲಾನುಭವಿಗಳ ಎಲ್ಲ ಮಾಹಿತಿಗಳು ಕೂಡ ಎಚ್​ಬಿಎಂಎಸ್ ತಂತ್ರಜ್ಞಾನದಲ್ಲಿ ದಾಖಲಿಸಬೇಕಿದೆ. ಇವೆಲ್ಲ ಮಾಹಿತಿಗಳು ತೋಟಗಾರಿಕಾ ಸಿಬ್ಬಂದಿಯಿಂದ ಆಗಬೇಕಿದೆ. ಚುನಾವಣಾ ಕಾರ್ಯ ಸೇರಿದಂತೆ ಇತರ ಕಾರ್ಯಗಳಿಂದ ಇಲಾಖಾ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ಹೀಗಾಗಿ ಇಲಾಖೆಯಿಂದ ಕಾರಣ ಕೇಳಿ ನೋಟೀಸ್ ಬರುತ್ತಿದೆ. ಇತರ ಇಲಾಖೆ ಕೆಲಸದಿಂದಾಗಿ ಯೋಜನೆಗಳ ಪ್ರಗತಿ ಕುಂಠಿತವಾಗುತ್ತಿದ್ದು, ಈ ಬಾರಿ ಬೆಳೆ ಸಮೀಕ್ಷೆ ಕೂಡ ನಮ್ಮ ಮೇಲೆಯೇ ಹೊರಿಸಲಾಗಿದೆ. ಕಂದಾಯ ಇಲಾಖೆ ಜವಾಬ್ದಾರಿಯಾದರೂ ಯಾವೊಬ್ಬ ಸಿಬ್ಬಂದಿಯನ್ನೂ ಹಾಕದೇ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಹಾಗಾಗಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ನಿಗದಿತ ಗುರಿಯನ್ನು ಕಡಿತ ಮಾಡಿ, ಇತರ ಇಲಾಖೆಗಳಿಗೂ ಹಂಚಬೇಕು ಎಂದು ವಿನಂತಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv