ಮಳೆಗಾಲದಲ್ಲಿ ಕೊಡಗು ಸ್ಪೆಷಲ್​: ಮಾರುಕಟ್ಟೆಗೆ ಏಡಿಗಳ ಲಗ್ಗೆ

ಕೊಡಗು: ಜಿಲ್ಲೆಯಲ್ಲಿ ಮಳೆಗಾಲ ಕಳೆಗಟ್ಟಿದೆ. ಮಳೆ, ಚಳಿ ನಡುವೆ ಇಲ್ಲಿನ ಜನರ ನಿತ್ಯದ ಜೀವನ ಸಾಗುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಜಿಲ್ಲೆಯ ಜನರ ಜೀವನ ಶೈಲಿ ಬದಲಾಗುತ್ತದೆ. ಅದರಂತೆ ಆಹಾರ ಪದ್ಧತಿ ಕೂಡಾ. ಮಳೆಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವಂತ ಖಾದ್ಯಗಳನ್ನೇ ಜನ ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಹೊಳೆ, ತೋಡುಗಳಲ್ಲಿ ಸಿಗುವ ಏಡಿಗೆ ಮಳೆಗಾಲದಲ್ಲಿ ಎಲ್ಲಿಲ್ಲದ ಮಹತ್ವ. ಮಾರುಕಟ್ಟೆಯಲ್ಲಿ ಏಡಿಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಕೆಆರ್​ಎಸ್ ಹಿನ್ನೀರು ಪ್ರದೇಶಗಳಿಂದ ಜೀವಂತ ಏಡಿ ಹಿಡಿದು ತರುವ ಆ ಭಾಗದ ಜನ ಮಡಿಕೇರಿಯಲ್ಲಿ ಭರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ. ಕೆಜಿಗೆ 200-250 ರೂ. ಇದ್ರೆ, ಒಂದು ಡಜನ್ ಏಡಿಗೆ 300 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ ಹಳ್ಳಿ ಭಾಗದ ಜನ ಗದ್ದೆ, ತೋಡು ಬದಿಗಳಲ್ಲಿ ಏಡಿ ಹಿಡಿದು ತರಹೇವಾರಿ ಖಾದ್ಯ ತಯಾರಿಸಿ ಸವಿಯುತ್ತಿದ್ದಾರೆ.

ಆರೋಗ್ಯಕ್ಕೆ ಒಳ್ಳೆಯದು :

ಏಡಿ ತಿನ್ನೋದ್ರಿಂದ ಅನೇಕ ಲಾಭ ಇದೆ. ಮಳೆಗಾಲದಲ್ಲಿ ಹೆಚ್ಚು ಚಳಿ ಇರೋದ್ರಿಂದ ದೇಹದ ಉಷ್ಣಾಂಶ ಸರಿದೂಗಿಸೋಕೆ ಇದು ನೆರವಾಗುತ್ತದೆ. ಜತೆಗೆ ದೈಹಿಕವಾಗಿ ಎದುರಾಗುವ ಸ್ನಾಯು ಸೆಳೆತ ಕೂಡಾ ನಿವಾರಣೆಯಾಗುತ್ತದೆ. ಮೊದಲೆಲ್ಲ ಕೊಡಗಿನ ಗದ್ದೆ, ತೋಡುಗಳಲ್ಲಿ ಹೇರಳವಾಗಿ ಏಡಿಗಳು ಸಿಗುತ್ತಿದ್ದವು. ಆದ್ರೆ ಕಳೆದ ಕೆಲವು ವರ್ಷಗಳಿಂದ ಗದ್ದೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡೋದಕ್ಕೆ ಶುರು ಮಾಡಿದ ನಂತರದಲ್ಲಿ ಅವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ ಅನ್ನೋದು ಕಟು ಸತ್ಯ.
ಎಚ್.ಡಿ.ಕೋಟೆಯಿಂದ ಏಡಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದೇನೆ. ಮಧ್ಯಾಹ್ನ ವೇಳೆಗೆ ಎಲ್ಲಾ ಏಡಿ ಮಾರಾಟವಾಗುತ್ತದೆ. ಕೊಡಗಿನಲ್ಲಿ ವಿವಿಧ ಕಾರಣಗಳಿಂದ ಏಡಿಗಳು ಸಿಗುತ್ತಿಲ್ಲ. ಹೀಗಾಗಿ ನಾವು ಮಾರಾಟ ಮಾಡುವ ಏಡಿಗೆ ಹೆಚ್ಚಿನ ಬೇಡಿಕೆಯಿದೆ ಅಂತಾ ಮಾರಾಟಗಾರರು ಹೇಳುತ್ತಾರೆ. ಇನ್ನೂ, ಜನರು ಏಡಿ ಕೊಂಡುಕೊಳ್ಳುವಲ್ಲಿ ಆಸಕ್ತಿ ತೋರುತ್ತಿರುವುದು ಮಾರಾಟಗಾರರಲ್ಲಿ ಹರ್ಷ ತಂದಿದೆ . ಏನೇ ಆದ್ರೂ ಕೊಡಗಿನ ಜನ ರುಚಿ ರುಚಿಯಾದ ಏಡಿ ಖಾದ್ಯಗಳನ್ನ ತಯಾರಿಸಿ ಬಾಯಿ ಚಪ್ಪರಿಸುತ್ತಾ ಆಹಾ.. ಏನು ರುಚಿ ಅಂತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv