ಸಿ.ಪಿ.ವೈ ಎಂಬ ಓಡೋ ಕುದುರೆ ಕಟ್ಟಿಹಾಕೋಕೆ ಹೆಚ್‌ಡಿಕೆ ಪ್ಲ್ಯಾನ್!

ಬೆಂಗಳೂರು: ರಾಜ್ಯ ರಾಜಕಾರಣದ ಕುತೂಹಲದ ಕೇಂದ್ರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಚರ್ಚೆ ಬಹುದಿನಗಳಿಂದ ನಡದೇ ಇದೆ. ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು‌. ಆದರೆ ಹೆಚ್.ಡಿ ಕುಮಾರಸ್ವಾಮಿಯವರೇ ಏಕ್‌ದಂ ಚನ್ನಪಟ್ಟಣದಲ್ಲಿ ಅಖಾಡಕ್ಕಿಳಿಯುವ ಮನಸ್ಸು ಮಾಡಿಬಿಡ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ.
ಹೆಚ್.ಡಿ.ಕೆ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸೋದಾಗಿ ಹೇಳಿದ್ದಾರೆ ಎಂದೇ ಹೇಳಲಾಗ್ತಿದೆ. ಇದೊಂಥರದಲ್ಲಿ ಚನ್ನಪಟ್ಟಣದ ಸಿ.ಪಿ ಯೋಗೇಶ್ವರ್ ಎಂಬ ಓಡೋ ಕುದುರೆಯನ್ನು ಕಟ್ಟಿ ಹಾಕಲು ಮಾಡಿರುವ ಪ್ಲಾನ್ ಅಂತಾನೇ ವಿಶ್ಲೇಷಣೆ ಮಾಡಲಾಗ್ತಿದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಬ್ರೇಕ್ ಹಾಕುವ ಪ್ಲ್ಯಾನ್!
ಇತ್ತೀಚೆಗಷ್ಟೆ ಸಿ.ಪಿ ಯೋಗೇಶ್ವರ್ ಬಿಜೆಪಿ ಸೇರಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಸಿ.ಪಿ.ವೈ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬಿಜೆಪಿ ನಿರ್ಧರಿಸಿದೆ. ಈ ಭಾಗದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ, ಚುನಾವಣೆ ತಯಾರಿ ಎಲ್ಲದರಲ್ಲೂ ಸಿ.ಪಿ.ವೈ ನಿರ್ಧಾರವನ್ನೇ ಪರಿಗಣಿಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಭಾಗದ ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ತಳ ಮಟ್ಟದಿಂದ ಚುನಾವಣೆಗೆ ತಯಾರಿ ಮಾಡೋ ಜವಾಬ್ದಾರಿ ಸಿ.ಪಿ ಯೋಗೇಶ್ವರ್‌ಗೆ ನೀಡಲಾಗಿದೆ. ಇದೇ ಬೆಳವಣಿಗೆ ಕುಮಾರಸ್ವಾಮಿಯವರು ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿರೋದು ಎನ್ನಲಾಗಿದೆ.
ಯೋಗೇಶ್ವರ್‌ರನ್ನು ಚನ್ನಪಟ್ಟಣಕ್ಕೇ ಸೀಮಿತಗೊಳಿಸಲು ತಂತ್ರ!
ಹಾಗೊಂದು ವೇಳೆ ಬಿಜೆಪಿಯ ಹಳೆ ಮೈಸೂರು ಭಾಗದ ಜವಾಬ್ಧಾರಿ ಯೋಗೇಶ್ವರ್‌ ಹೆಗಲೇರಿದರೆ, ಅವರನ್ನು ಕಟ್ಟಿ ಹಾಕುವುದು ಹೆಚ್.ಡಿ.ಕೆಗೆ ಅನಿವಾರ್ಯ. ಯಾಕಂದ್ರೆ ಜೆಡಿಎಸ್‌ ಪ್ರಬಲವಾಗಿರೋದು ಹಳೆ ಮೈಸೂರು ಭಾಗದಲ್ಲೇ. ಇದಕ್ಕಾಗಿಯೇ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರವನ್ನ ಕುಮಾರಸ್ವಾಮಿಯವರು ಮಾಡ್ತಾ ಇರೋ ಹಾಗಿದೆ.
ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಸಿಎಂ ಅಭ್ಯರ್ಥಿ ಕಣಕ್ಕಿಳಿದರೆ ಸಿ.ಪಿ.ವೈ ಗೂ ಸವಾಲಾಗಿ ಪರಿಣಮಿಸಲಿದೆ. ಹೀಗಾಗಿ ಸಿ.ಪಿ ಯೋಗೇಶ್ವರ್, ಹಳೇ ಮೈಸೂರು ಭಾಗದ ಇತರೆ ಜಿಲ್ಲೆಗಳಲ್ಲಿ ಓಡಾಡೋದನ್ನ ಬಿಟ್ಟು ಕೇವಲ ಚನ್ನಪಟ್ಟಣದ ಮೇಲೆ ಹೆಚ್ಚು ಕೇಂದ್ರೀಕರಿಸಿ ಕೆಲಸ ಮಾಡಬೇಕಾಗುತ್ತೆ. ಇದೊಂಥರದಲ್ಲಿ ಸಿ.ಪಿ.ವೈ ವೇಗಕ್ಕೆ ಕಡಿವಾಣ ಬಿದ್ದಂತಾಗುತ್ತದೆ ಎಂಬ ಲೆಕ್ಕಾಚಾರ ಜೆಡಿಎಸ್‌ನವರದ್ದಾಗಿದೆ.
ಆದರೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಲು ಜೆಡಿಎಸ್ ಮುಖಂಡರ ವಿರೋಧ ಇದೆ. ಹೀಗಾಗಿ ಹೆಚ್.ಡಿ‌.ಕೆ ಮತ್ತೇನು ನಿರ್ಧಾರ ಕೈಗೊಳ್ಳುವರೋ ಅನ್ನೋದೇ ಕುತೂಹಲ ಕೆರಳಿಸಿದೆ.

Leave a Reply

Your email address will not be published. Required fields are marked *