ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರದಲ್ಲೇ ರೈತರಿಗೆ ನೋಟಿಸ್​​

ರಾಮನಗರ: ಸಿಎಂ ಸ್ವಕ್ಷೇತ್ರದಲ್ಲೇ ರೈತರಿಗೆ ಕೋರ್ಟ್​​ನಿಂದ ನೋಟಿಸ್​ ನೀಡಲಾಗಿದೆ. 2010-11ರಲ್ಲಿ ಕೆನರಾ ಬ್ಯಾಂಕ್​ನಲ್ಲಿ ಕೃಷಿ ಸಾಲ ಪಡೆದಿದ್ದ ರೈತ ಮಹಿಳೆ ಶಾರದಮ್ಮ ಸೇರಿದಂತೆ ಮೂವರು ಮಕ್ಕಳಿಗೂ ನೋಟಿಸ್​ ಜಾರಿಯಾಗಿದೆ.

ಚನ್ನಪಟ್ಟಣ ತಾಲೂಕಿನ ಕುರಿದೊಡ್ಡಿ ಗ್ರಾಮದ ಶಾರದಮ್ಮ ಹಾಗೂ ಆಕೆಯ ಮಕ್ಕಳಾದ ಉಮಾಪತಿ, ಯೋಗಾನಂದ, ಪಂಕಜ್​​ ಎಂಬುವರಿಗೆ ಕೋರ್ಟ್​​ನಿಂದ ನೋಟಿಸ್​ ನೀಡಲಾಗಿದೆ. ಡಿಸೆಂಬರ್ 1ರಂದು ಚನ್ನಪಟ್ಟಣದ ಜೆಎಂಎಫ್​​ಸಿ ಕೋರ್ಟ್​​ನಿಂದ ನೋಟಿಸ್ ಜಾರಿ ಮಾಡಲಾಗಿದೆ. ಬೇವೂರು ಗ್ರಾಮದಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಶಾರದಮ್ಮ ಕೃಷಿಗಾಗಿ ₹ 2 ಲಕ್ಷ ತೆಗೆದುಕೊಂಡಿದ್ದರು.

ಇನ್ನು, ಕೋರ್ಟ್ ನೋಟಿಸ್​​ನಿಂದ ಕಂಗಾಲಾದ ಕುಟುಂಬ ರೈತಸಂಘದ ಮೊರೆಹೋಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ, ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಬಾಯಿ ಮಾತಿನಲ್ಲಿ ಹೇಳಿಕೊಂಡು ರೈತರ ಬಾಳಿನೊಡನೆ ಚೆಲ್ಲಾಟವಾಡುತ್ತಿದ್ದಾರೆ. ಇದು ಸರಿಯಲ್ಲ ಕೂಡಲೆ ಈ ಬಗ್ಗೆ ಗಮನಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.