ಕೀಳುಮಟ್ಟದ ರಾಜಕೀಯಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ..!

ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ ಉದ್ಯಮಿ ಮತ್ತು ಆತನ ಪತ್ನಿ, ವೈಶಾಲಿ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಮೃತ್ಯುಂಜಯ ಪಾಟೀಲ್ (60) ಮತ್ತು ಪತ್ನಿ ನೇತ್ರಾವತಿ (54) ಮೃತರು. ಹಾವೇರಿ ಜಿಲ್ಲೆ ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಪಾಟೀಲ್ ಸೋದರ ಸಂಬಂಧಿ ಮೃತ್ಯುಂಜಯ ಪಾಟೀಲ್, ಈ ಬಾರಿಯ ಚುನಾವಣೆಯಲ್ಲಿ ಹಣದ ವ್ಯವಹಾರ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸಿದ್ದ ದಂಪತಿ, ಸಂಜೆ ಹೊತ್ತಿಗೆ ವೈಶಾಲಿ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ರಾಜಕೀಯದಲ್ಲಿ ಹಣ, ಹೆಂಡದಿಂದ ಕೀಳುಮಟ್ಟಕ್ಕೆ ಇಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ. ಇದ್ರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಹಾಳಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೋಡಿಕೊಳ್ಳಬೇಕು‌. ಅವರು ಸರಿದಾರಿಗೆ ತರಬೇಕೆಂಬ ನಿರೀಕ್ಷೆಯಿಂದ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ಡೆತ್ ನೋಟ್​ನಲ್ಲಿ ಬರೆದಿಟ್ಟಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv