ಹನಿಮೂನ್​​ಗೆ ಹೋದ್ರು, ಕುಡಿದು ಟೈಟ್​ ಆದ್ರು, ತಾವಿದ್ದ ಹೋಟೆಲ್​​​ನೇ ಖರೀದಿಸಿಬಿಟ್ರು..!

ಕುಡಿದ ಮತ್ತಲ್ಲಿ ಸಾಕಷ್ಟು ಅವಾಂತರಗಳನ್ನ ಮಾಡಿಕೊಂಡಿರೋ ಬಗ್ಗೆ ಕೇಳಿರ್ತೀರಾ. ಮದ್ಯದ ನಶೆಯಲ್ಲಿ ಫ್ರೆಂಡ್​​ಗೆ ಬೈಯ್ಯೋದು, ಹಳೇ ಗೆಳತಿಗೆ ಫೋನ್ ಮಾಡಿ ಗೋಳೋ ಅಂತ ಅಳೋದು, ಯರ್ರಾಬಿರ್ರಿ ಕಾರ್​ ಓಡಿಸೋದು ಹೀಗೆ ಒಂದಲ್ಲ ಒಂದು ಯಡವಟ್ಟು ಮಾಡಿಕೊಂಡಿರೋರು ಇದ್ದಾರೆ. ಆದ್ರೆ ಬೆಳಗ್ಗೆ ಎದ್ದ ನಂತರ ಅಯ್ಯೋ ಯಾಕದ್ರೂ ಹಂಗ್ ಮಾಡಿದ್ನೋ ಅಂತ ಪಶ್ಚಾತ್ತಾಪ ಪಡೋರು ಇದ್ದಾರೆ. ಇಲ್ಲೊಂದು ಜೋಡಿ ಹನಿಮೂನ್​ಗೆ ಹೋದಾಗ, ಕುಡಿದ ಮತ್ತಲ್ಲಿ ಇಡೀ ಹೋಟೆಲ್​​​ ಖರೀದಿಸಿದೆ ಅಂದ್ರೆ ನೀವು ನಂಬಲೇಬೇಕು.

ಹೌದು.. ಕಳೆದ ವರ್ಷ ಜೂನ್​ನಲ್ಲಿ ಮದುವೆಯಾಗಿದ್ದ, ಲಂಡನ್​​​ ಮೂಲದ ಗಿನಾ ಲಯೋನ್ಸ್​ ಹಾಗೂ ಮಾರ್ಕ್​​ ಲೀ, ಶ್ರೀಲಂಕಾಗೆ ಹನಿಮೂನ್​ಗೆ ಹೋಗಿದ್ದರು. ಹೋಗುವಾಗ ಗ್ರಾಹಕರಾಗಿ ಹೋಗಿದ್ದ ದಂಪತಿ, ವಾಪಸ್​​ ಬರುವಾಗ ತಾವು ತಂಗಿದ್ದ ಹೋಟೆಲ್​​ಗೇ ಮಾಲೀಕರಾಗಿದ್ರು.

ಆಗಿದ್ದೇನಪ್ಪಾ ಅಂದ್ರೆ.., ದಂಪತಿ ಹೋಟೆಲ್​​​ಗೆ ಚೆಕ್​-ಇನ್​ ಆದ ರಾತ್ರಿ 12 ಗ್ಲಾಸ್​​ ರಮ್​ ಕುಡಿದಿದ್ದಾರೆ. ಈ ವೇಳೆ ಗಿನಾ ಹಾಗೂ ಮಾರ್ಕ್​​​​ಗೆ ಈ ಹೋಟೆಲ್​ ಲೀಸ್​​ಗೆ ತೆಗೆದುಕೊಂಡರೆ ಹೇಗೆ ಅನ್ನೋ ಐಡಿಯಾ ಬಂದಿದೆ. ಅಷ್ಟೇ ನೋಡಿ… ಕುಡಿದ ಅಮಲಿನಲ್ಲೇ ಹೋಟೆಲ್​ ಲೀಸ್​​ಗೆ ಡೀಲ್​ ಮುಗಿಸಿಯೇಬಿಟ್ರು. ಆದ್ರೆ ಬೆಳಗ್ಗೆ ಎದ್ದಾಗ ಗಿನಾ ಹಾಗೂ ಮಾರ್ಕ್​​ಗೆ ಕಳೆದ ರಾತ್ರಿ ನಡೆದ ಸಂಭಾಷಣೆ ಪೂರ್ತಿಯಾಗಿ ನೆನಪೇ ಇರಲಿಲ್ಲವಂತೆ.

ಮರುದಿನ ನಾವು ಲೀಸ್​​ ನವೀಕರಣದ ಬಗ್ಗೆ ಮಾತನಾಡಲು ವೃದ್ಧ ದಂಪತಿಯ ಭೇಟಿಗೆ ಹೋದೆವು. ಯಾಕಂದ್ರೆ ರಾತ್ರಿ ಮಾತಾಡಿದ್ದು ನಮಗೆ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ನಾನು ಹಾಗೂ ಮಾರ್ಕ್​​​ ಮತ್ತಷ್ಟು ರಮ್​ ಕುಡಿದು ಟೈಟ್​ ಆಗಿದ್ದೆವು ಎಂದು ಗಿನಾ ಹೇಳಿದ್ದಾರೆ.

ಇನ್ನು ಮಾತುಕತೆಯ ಬಳಿಕ ಗಿನಾ ಹಾಗೂ ಮಾರ್ಕ್​​​​ 3 ವರ್ಷಕ್ಕೆ 30,000 ಪೌಂಡ್ಸ್( ಅಂದಾಜು 29 ಲಕ್ಷ) ಬಾಡಿಗೆಯಂತೆ ಹೋಟೆಲ್​​ ಲೀಸ್​​ಗೆ ಡೀಲ್​ ಮಾಡಿಕೊಂಡಿದ್ದಾರೆ. ಮೊದಲ ವರ್ಷ 15 ಸಾವಿರ ಪೌಂಡ್ಸ್​ ಕೊಡುವುದಾಗಿ ಹೇಳಿ ಮಿಕ್ಕ ಹಣ 2019ರ ಮಾರ್ಚ್​​ ವೇಳೆಗೆ ಪಾವತಿಸುವುದಾಗಿ ಒಪ್ಪಿಕೊಂಡಿದ್ದಾರೆ. ಈ ವರ್ಷ ಜುಲೈ 1ರಂದು ಗಿನಾ ಹಾಗೂ ಮಾರ್ಕ್​ ಆ ಹೋಟೆಲ್​​ಗೆ ಅಧಿಕೃತವಾಗಿ ಮಾಲೀಕರಾಗಿದ್ದಾರೆ. ಅಲ್ಲದೆ ಆ ಹೋಟೆಲ್​ಗೆ ಲಕ್ಕಿ ಬೀಚ್​ ಟ್ಯಾಂಗಲೆ ಎಂದು ಹೆಸರಿಟ್ಟಿದ್ದಾರೆ. ಇವರ ಈ ಸ್ಟೋರಿ ಹಲವು ಪತ್ರಿಕೆಗಳಲ್ಲೂ ಪ್ರಕಟವಾಗಿದೆ.

ಈ ಹೋಟೆಲ್​​​ಗೆ ಉತ್ತಮ ಸಂಖ್ಯೆಯಲ್ಲೇ ಗ್ರಾಹಕರು ಬರುತ್ತಿದ್ದು, ಆದಾಯವೂ ತಕ್ಕ ಮಟ್ಟಿಗೆ ಇದೆ. ಆದ್ರೆ ಈ ದಂಪತಿಯ ನಿರ್ಧಾರ ಮಾತ್ರ ಮೂರ್ಖತನ ಅಂತ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಹೇಳಿದ್ರಂತೆ. ಇನ್ನು ಈ ಹೋಟೆಲ್​​​ ಮತ್ತಷ್ಟು ಬೆಳೆಸುವ ಬಗ್ಗೆ ಆಲೋಚನೆ ಇದ್ದು, ಅದನ್ನ ಕುಡಿದಾಗ ಅಲ್ಲ , ಸರಿಯಾಗಿ ಇದ್ದಾಗಲೇ ಮಾಡ್ತೀವಿ ಎಂತಾರೆ ಈ ದಂಪತಿ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv