ದಂಪತಿಗಾಗಿ ಸ್ನಾನ ಗೃಹದಲ್ಲೇ ಕಾದು ಕುಳಿತಿದ್ನಾ ಜವರಾಯ..?

ಬೆಂಗಳೂರು: ಅಪಾರ್ಟ್‌ಮೆಂಟ್​ವೊಂದರ​ ಫ್ಲಾಟ್​ನ ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಸರ್‌ನಲ್ಲಿ ಅನಿಲ ಸೋರಿಕೆಯಾಗಿ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶಿವಗಂಗಾ ಅಪಾರ್ಟ್‌ಮೆಂಟ್​​ನಲ್ಲಿ ಈ ಘಟನೆ ನಡೆದಿದೆ.
ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಮಹೇಶ್(35) ಹಾಗೂ ಅವರ ಪತ್ನಿ ಶೀಲಾ(30) ಮೃತ ದುರ್ದೈವಿಗಳು.

ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ದಂಪತಿ ಸ್ನಾನಕ್ಕೆ ತೆರಳಿದ್ದಾಗ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮಧ್ಯಾಹ್ನ ಶಾಲೆ ಮುಗಿಸಿ  ಮಗಳು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮಹೇಶ್ ಮೂಲತಃ ಅಥಣಿ ತಾಲೂಕಿನವರಾಗಿದ್ದು, ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದ್ರು. 7 ವರ್ಷಗಳ ಹಿಂದೆ ಶೀಲಾ ಜತೆ ಅವರಿಗೆ ವಿವಾಹವಾಗಿತ್ತು.

ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮಹೇಶ್​ ವೈಟ್‌ಫೀಲ್ಡ್ ಹತ್ತಿರ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಪತ್ನಿ ಮತ್ತು ಮಕ್ಕಳ ಜತೆ ಶಿವಗಂಗಾ ಅಪಾರ್ಟ್‌ಮೆಂಟ್‌ನ ಮೊದಲ ಹಂತದ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಮಕ್ಕಳು ತಮ್ಮ ಫ್ಲಾಟ್​ ಸಮೀಪದಲ್ಲೇ ಇರುವ ಖಾಸಗಿ ಶಾಲೆಗೆ ಬೆಳಗ್ಗೆ ತೆರಳಿದ್ದರು. ನಂತರ ದಂಪತಿ, ಒಟ್ಟಿಗೆ ಸ್ನಾನ ಮಾಡಲು ತೆರಳಿದ್ದಾಗ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ನಾನದ ಕೋಣೆ ಬಾಗಿಲು ತೆಗೆದಾಗ ಬೆತ್ತೆಲೆಯಾಗಿ ಮಹೇಶ್ ದಂಪತಿಯ ಮೃತ ದೇಹ ಪತ್ತೆಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv