ಅಧಿವೇಶನ ಮುಗಿಯೋ ತನಕ ನಾಲ್ವರು ರೆಬಲ್ ಶಾಸಕರು ಸೇಫ್..?

ಬೆಂಗಳೂರು: ‘ಕಾಂಗ್ರೆಸ್​ನ ನಾಲ್ವರು ಆತೃಪ್ತ ಶಾಸಕರನ್ನು ಏಕಾಏಕಿ ನರ್ಹಗೊಳಿಸಲು ಆಗಲ್ಲ’ ಅಂತಾ ಸ್ಪೀಕರ್ ರಮೇಶ್‌ ಕುಮಾರ್ ಸ್ಪಷ್ಟಪಡಿಸಿದ್ದಾರೆ. ರಮೇಶ್​ ಜಾರಕಿಹೊಳಿಯನ್ನ ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ಕಾಂಗ್ರೆಸ್​ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೇ ಇವರ ಬೆಂಬಲಿಗರೂ ಹಾಗೂ ಶಾಸಕರೂ ಆಗಿರುವ ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ನಾಗೇಂದ್ರ ಕೂಡ ಯಾರ ಸಂಪರ್ಕಕ್ಕೂ ಇದುವರೆಗೂ ಸಿಕ್ಕಿಲ್ಲ. ಅಲ್ಲದೇ ಕಾಂಗ್ರೆಸ್​ನ ಸಿಎಲ್​​ಪಿ ಮೀಟಿಂಗ್​ಗೂ ಹಾಜರಾಗಿಲ್ಲ. ಶೋಕಾಸ್​ ನೋಟಿಸ್​ ನೀಡಿದ್ದರೂ ಕೂಡ ಸರಿಯಾದ ಉತ್ತರವನ್ನ ಕೆಲವರು ಕೊಟ್ಟಿಲ್ಲ. ಖುದ್ದು ಶಾಸಕಾಂಗ ಪಕ್ಷದ ನಾಯಕರನ್ನ ಹಾಜರಾಗಿ ಅಂದ್ರೂ ಬಂದಿಲ್ಲ. ಅಲ್ಲದೇ ವಿಧಾನಸಭಾ ಕಲಾಪಕ್ಕೆ ಆಗಮಿಸುವಂತೆ ವಿಪ್ ಜಾರಿ ಮಾಡಿದ್ದರೂ ಕ್ಯಾರೇ ಎನ್ನಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಶಾಸಕಾಂಗ ಪಕ್ಷದ ನಾಯಕರು ಅವರ ಸ್ಥಾನವನ್ನ ಅನರ್ಹ ಮಾಡುವಂತೆ ಸ್ಪೀಕರ್​ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಸ್ಪೀಕರ್ ರಮೇಶ್​ ಕುಮಾರ್ ಏಕಾಏಕಿಯಾಗಿ ನಾಲ್ವರನ್ನ ಅನರ್ಹ ಮಾಡಲು ಆಗಲ್ಲ ಅಂತಾ ಹೇಳಿದ್ದಾರೆ. ಈ ಮೂಲಕ ಅಧಿವೇಶನ ಮುಕ್ತಾಯ ಆಗೋವರೆಗೂ ನಾಲ್ವರು ಅತೃಪ್ತ ಶಾಸಕರುಗಳು ಸೇಫಾಗ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ನಾಲ್ವರು ರೆಬಲ್​​ ಶಾಸಕರನ್ನ ಅನರ್ಹಗೊಳಿಸುವ ವಿಚಾರ ಸಂಬಂಧ ಬೆಳಗ್ಗೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಭಾಧ್ಯಕ್ಷ ರಮೇಶ್​ ಕುಮಾರ್ ಅವರನ್ನ ಭೇಟಿ ಆಗಿದ್ದರು. ಇದಾದ ನಂತರ ಮಧ್ಯಾಹ್ನ ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಕೂಡ ಸಭಾಧ್ಯಕ್ಷರನ್ನ ಭೇಟಿಯಾಗಿ ನಾಲ್ವರು ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ಚರ್ಚೆ ನಡೆಸಿದರು. ವಿಧಾನಸೌಧ ಸ್ಪೀಕರ್​ ಕೊಠಡಿಯಲ್ಲಿ ಸ್ಪೀಕರ್ ರಮೇಶ್‌ಕುಮಾರ್, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಸುದೀರ್ಘ ಚರ್ಚೆ ನಡೆಸಿದರು.

ಚರ್ಚೆ ಬಳಿಕ ಸ್ಪೀಕರ್ ಹೇಳಿದ್ದೇನು..?
‘‘ಮೊದಲು ಆ ನಾಲ್ವರು ಶಾಸಕರನ್ನು ಕರೆದು ವಿಚಾರಣೆ ಮಾಡಬೇಕು. ಅವರು ಸದನ ಮತ್ತು ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದು ಯಾಕೆ ಅನ್ನೋದನ್ನ ಅರ್ಥೈಸಿಕೊಳ್ಳಬೇಕು. ನೀವು ಅನರ್ಹ ಮಾಡಲು ನೀಡಿರುವ ಕಾರಣಗಳ ಪ್ರಕಾರ, ನಾಲ್ವರು ಅತೃಪ್ತರು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಿಜವಾಗಿಯೂ ಮಾಡಿದ್ದಾರಾ ಅನ್ನೋದ್ರ ಬಗ್ಗೆ ತಿಳ್ಕೋಬೇಕು. ವಿಚಾರಣೆಗೆ ಒಳಪಡಿಸಬೇಕೆಂದ್ರೆ ಅವರಿಗೆ ವಿಧಾನಸಭೆ ಸಚಿವಾಲಯದ ಮೂಲಕ ನನ್ನ ಲೆಟರ್ ಹೆಡ್‌ನಲ್ಲಿ ನೋಟಿಸ್ ಕೊಡಬೇಕು. ಜೊತೆಗೆ ಈಗ ಅಧಿವೇಶನ ನಡೆಯುತ್ತಿದೆ. ಫೆಬ್ರವರಿ 15 ರವರೆಗೂ ಅಧಿವೇಶನ ನಡೆಯುತ್ತದೆ. ಅಲ್ಲಿಯವರೆಗೂ ಅತೃಪ್ತರ ಜೊತೆಗೆ ಚರ್ಚೆ ಅಸಾಧ್ಯ. ನನ್ನ ಪ್ರಕಾರ ಆ ನಾಲ್ವರು ಅಧಿವೇಶನಕ್ಕೆ ಹಾಜರಾಗುವುದಿಲ್ಲ. ರಾಜೀನಾಮೆಯನ್ನೂ ನೀಡುವುದಿಲ್ಲ. ಒಂದು ವೇಳೆ ಆ ನಾಲ್ವರು ಆತೃಪ್ತ ಶಾಸಕರು ಸದನಕ್ಕೆ ಬಂದರೆ ಅಥವಾ ರಾಜೀನಾಮೆ ಪತ್ರ ಕೊಟ್ಟರೆ ಮುಂದೆ ಮತ್ತೆ ಸಭೆ ಸೇರಿ‌ ಚರ್ಚಿಸೋಣ. ಇದೆಲ್ಲದ್ರ ಮಧ್ಯೆ ಮತ್ತೊಂದು ಪ್ರಮುಖ ವಿಷಯ ಅಂದ್ರೆ, ನಾಲ್ವರು ಆತೃಪ್ತರು ನನ್ನ ಮುಂದೆ ಸರಿಯಾದ ಕಾರಣ ಕೊಟ್ಟರೇ ಅದನ್ನೂ  ಪರಿಗಣಿಸಬೇಕು. ಈ ಪ್ರಕ್ರಿಯೆಗಳೆಲ್ಲಾ ಮುಗಿಯುವವರೆಗೂ ಏಕಾಏಕಿ ಅನರ್ಹತೆ ಅಸಾಧ್ಯ
-ರಮೇಶ್ ಕುಮಾರ್, ಸಭಾಧ್ಯಕ್ಷ

ಈ ಮೂಲಕ ನಾಲ್ವರು ಶಾಸಕರನ್ನ ಅನರ್ಹಗೊಳಿಸಬೇಕು ಅಂದ್ಕೊಂಡಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕರಿಗೆ ನಿರಾಸೆ ಆಗಿದೆ. ಅಲ್ಲದೇ ಸ್ಪೀಕರ್ ಹೇಳಿಕೆಗೆ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಒಪ್ಪಿಗೆ ಸೂಚಿಸಿ ವಾಪಸ್​ ಆಗಿದ್ದಾರೆ. ಹೀಗಾಗಿ ಅಧಿವೇಶನ ಮುಗಿಯುವವರೆಗೂ ಅತೃಪ್ತ ಶಾಸಕರ ನಡೆಯ ವಿಚಾರವನ್ನು ಮುಟ್ಟದಿರಲು ಸಿದ್ದರಾಮಯ್ಯ ನೇತೃತ್ವದ ಟೀಂ ನಿರ್ಧರಿಸಿದೆ.