ಬಿಜೆಪಿ ಸಂಪರ್ಕಕ್ಕೆ ಸಿಗದಂತೆ ಕಾಂಗ್ರೆಸ್ ಶಾಸಕರ ರಕ್ಷಣೆ..!

ಬೆಂಗಳೂರು: ಬಿಜೆಪಿ ಬಳಿಕ ಕಾಂಗ್ರೆಸ್​ ಪಾಳಯದಲ್ಲೂ ರೆಸಾರ್ಟ್​ ರಾಜಕಾರಣ ಶುರುವಾಗಿದೆ. ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್​ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್​ ಮಾಡಲಾಗಿದೆ. ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಿಡದಿಯ ಈಗಲ್ಟನ್, ವಂಡರ್‌ ಲಾ ರೆಸಾರ್ಟ್​ಗಳಿಗೆ ಶಿಫ್ಟ್​ ಮಾಡಿದ್ದಾರೆ. ಬಿಜೆಪಿಯ ಸಂಪರ್ಕಕ್ಕೆ ಯಾವುದೇ ಶಾಸಕರು ಸಿಗದಂತೆ ಕೈ ಹಿರಿಯರು ಹದ್ದಿನ ಕಣ್ಣಿಟ್ಟಿದ್ದಾರೆ. ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕರು ಸೇರಿದಂತೆ 30ರಿಂದ 35 ಶಾಸಕರು ವಾಸ್ತವ್ಯ ಹೂಡಿದ್ದಾರೆ. ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್, ಅಮರೇಗೌಡ ಬೈಯ್ಯಾಪುರ, ಆನಂದ್ ನ್ಯಾಮೇಗೌಡ, ಎಂ. ವೈ ಪಾಟೀಲ್, ಭೈರತಿ ಸುರೇಶ್, ಎಸ್. ಟಿ. ಸೋಮಶೇಖರ್, ಅಖಂಡ ಶ್ರೀನಿವಾಸ್ ಮೂರ್ತಿ, ಭೈರತಿ ಬಸವರಾಜ್, ಮುನಿರತ್ನ, ನಂಜೇಗೌಡ, ಗಣೇಶ ಹುಕ್ಕೇರಿ ಸೇರಿದಂತೆ ಹಲವು ಶಾಸಕರು ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಅಷ್ಟೇ ಅಲ್ಲದೇ ಸಚಿವ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಕೂಡ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಸಚಿವ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ತಡ ರಾತ್ರಿ ರೆಸಾರ್ಟ್‌ಗೆ ಬಂದು ವಾಪಸ್ ತೆರಳಿದ್ದಾರೆ.