ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್​ ಜಾರಕಿಹೊಳಿ‌ ರಾಜೀನಾಮೆ..?

ಬೆಳಗಾವಿ: ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸಂಪುಟ ರಚನೆ ಸಂಬಂಧ ಏನೇನೂ‌ ಫಾರ್ಮುಲಾ ಹರಿಯಬಿಟ್ಟಿದ್ದರೂ ಸದ್ಯಕ್ಕೆ, ಕ್ಯಾಬಿನೆಟ್​ ರಚನೆ ಸೂತ್ರವಿಲ್ಲದ ಗಾಳಿಪಟದಂತಾಗಿದೆ.
ಬೆಂಗಳೂರಿನಲ್ಲಿದ್ದು, ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಸತೀಶ್​ ಜಾರಕಿಹೊಳಿ‌ ಇದೀಗ ತಾನೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್​ ಜಾರಕಿಹೊಳಿ, ಸದ್ಯದಲ್ಲಿಯೇ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸ್ವತಃ ತಾವೇ ಸಚಿವ ಸ್ಥಾನ ಪಡೆಯುವಲ್ಲಿ ಮತ್ತು ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಸತೀಶ್​ ಜಾರಕಿಹೊಳಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅನೇಕ ಅತೃಪ್ತ ಶಾಸಕರು ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಎರಡು ದಿನದಲ್ಲಿ ಸಭೆ ನಡೆಸಿ, ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಅವರು ಸುಳಿವು ನೀಡಿದ್ದಾರೆ.

ಇದೇ ವೇಳೆ ಅವರು ತಮಗೆ ಸಚಿವ ಸ್ಥಾನ ತಪ್ಪಿಸಿದ್ದು ಯಾರು? ಎಂಬುದನ್ನೂ ಒಂದು ವಾರದಲ್ಲಿ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ನನಗೆ ಬೆಂಗಳೂರು ಮತ್ತು ದೆಹಲಿಯಲ್ಲಿಯೂ ವಿರೋಧಿಗಳು ಇದ್ದಾರೆ. ಶೀಘ್ರವಾಗಿ ಅವರ ಹೆಸರು ಬಹಿರಂಗ ಪಡಿಸುವೆ ಅಂತ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv