ಇಮ್ರಾನ್‌ ಖಾನ್ ಸೌಮ್ಯ ವ್ಯಕ್ತಿ; ಮೋದಿ ಟೀಕಿಸುವ ಭರದಲ್ಲಿ ಪಾಕ್ ಪ್ರಧಾನಿ ಹೊಗಳಿದ ಕಾಂಗ್ರೆಸ್​ ಶಾಸಕ

ಉಡುಪಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಸಭ್ಯ ಹಾಗೂ ಸೌಜನ್ಯ ವ್ಯಕ್ತಿ ಅಂತ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ ಮಧ್ವರಾಜ್ ಪರ ಎನ್.ಆರ್.ಪುರದ ಮೆಣಸೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರೋ ರಾಜೇಗೌಡ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಯುದ್ಧ ವಿಮಾನ ಪಾಕಿಸ್ತಾನದ ಗಡಿಗೆ ಹೋಗಿತ್ತು. ಅವರ ಯುದ್ಧ ವಿಮಾನವನ್ನ ಹೊಡೆದುರುಳಿಸಿದ್ದು ನಿಜ. ಅದಾದ ಬಳಿಕ ನಮ್ಮ ದೇಶದ ವಿಂಗ್ ಕಮಾಂಡರ್ ಅಭಿನಂದನ್​ರನ್ನ ವಶದಲ್ಲಿಟ್ಟುಕೊಂಡಿದ್ದು ನಿಜ. ಅಭಿನಂದನ್ ಬಂಧನದ ಬಳಿಕ ಮೋದಿ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ್ರು. ಆದ್ರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಸಜ್ಜನ ವ್ಯಕ್ತಿ. ಅವರು ನಮ್ಮ ದೇಶವನ್ನು ನೋಡಿದ್ದಾರೆ. ನಮ್ಮ ಸೈನಿಕರನ್ನು ನೋಡಿ ಇಮ್ರಾನ್ ಖಾನ್ ವಿಂಗ್ ಕಮಾಂಡರ್ ಅಭಿನಂದನ್​ರನ್ನು ಬಿಡುಗಡೆಗೊಳಿಸಿದ್ದೇ ಹೊರತು ಮೋದಿ ಬೆದರಿಕೆಯಿಂದಲ್ಲ ಅಂತ ಹೇಳಿದ್ದಾರೆ. ಸದ್ಯ ರಾಜೇಗೌಡ ಇಮ್ರಾನ್​ಖಾನ್​​ರನ್ನ ಹೀಗೆ ಹಾಡಿ ಹೊಗಳಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.