ಗಣಿನಾಡು ‘ಕೈ’ ಅಭ್ಯರ್ಥಿ ಕಸರತ್ತು ಮತ್ತಷ್ಟು ಕಗ್ಗಂಟ್ಟು: ಶಾಸಕರಿಗೇ ನಿರಾಸಕ್ತಿ!

ಬೆಂಗಳೂರು: ಬಳ್ಳಾರಿ ಲೋಕಸಭಾ ಉಪ-ಚುನಾವಣೆಗೆ ಯಾರನ್ನ ಅಭ್ಯರ್ಥಿ ಮಾಡಬೇಕು ಅನ್ನೋ ಚಿಂತೆ ಕಾಂಗ್ರೆಸ್‌ ಪಕ್ಷವನ್ನ ಕಾಡುತ್ತಿದೆ. ಎರಡು ದಿನಗಳಿಂದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರೂ ಅಭ್ಯರ್ಥಿಯನ್ನ ಅಂತಿಮ ಮಾಡಲು ಸಾಧ್ಯವಾಗಿಲ್ಲ. ಎರಡು ಸಭೆಗಳು ವಿಫಲವಾದ ಹಿನ್ನೆಲೆಯಲ್ಲಿ ಇಂದು ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ ಸಭೆ ನಡೆಯಲಿದೆ.
ಕ್ರೆಸೆಂಟ್ ರಸ್ತೆಯಲ್ಲಿರುವ ಸಚಿವ ಡಿ.ಕೆ.ಶಿವಕುಮಾರ್​ ಸರ್ಕಾರಿ ನಿವಾಸದಲ್ಲಿ ಇಂದು ಸಭೆ ನಡೆಯಲಿದೆ. ನಿನ್ನೆ ನಡೆದ ಸಭೆಯಲ್ಲಿ ಶಾಸಕರಾದ ನಾಗೇಂದ್ರ ಹಾಗೂ ತುಕಾರಂ ಮಾತ್ರ ಭಾಗಿಯಾಗಿದ್ದರು. ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್, ಹೊಸಪೇಟೆ ಶಾಸಕ ಆನಂದ್ ಸಿಂಗ್, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್‌, ಕಂಪ್ಲಿ ಶಾಸಕ ಗಣೇಶ್ ಸಭೆಗೆ ಗೈರಾಗಿದ್ದರು. ಬಹುತೇಕ ಇಂದಿನ ಸಭೆಗೂ ಎಲ್ಲಾ ಆರು ಶಾಸಕರು ಹಾಜರಾಗುವುದು ಅನುಮಾನ ಎನ್ನಲಾಗುತ್ತಿದೆ. ಬಳ್ಳಾರಿ ಶಾಸಕರು ಉಪ-ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಿರಾಸಕ್ತಿ ತೋರಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗದ ಹಿನ್ನೆಲೆಯಲ್ಲಿ ಚುನಾವಣೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎನ್ನಲಾಗ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv