ಎಂ.ಬಿ ಪಾಟೀಲ್‌ಗೆ ಪತ್ನಿಯಿಂದ ಇನ್‌ಫ್ಲುಯೆನ್ಸ್‌.. ಕೈ ಮಾಸ್ಟರ್‌ಪ್ಲಾನ್‌..!

ಬೆಂಗಳೂರು: ಕಾಂಗ್ರೆಸ್‌ ಅತೃಪ್ತ ಶಾಸಕ ಎಂ.ಬಿ ಪಾಟೀಲ್‌ ಮನವೊಲಿಕೆಗೆ ಸರ್ಕಸ್‌ ಮುಂದುವರೆದಿದೆ. ಅದ್ರಲ್ಲೂ ಅತೃಪ್ತ ಶಾಸಕರ ನೇತೃತ್ವ ವಹಿಸಿರೋ ಎಂ.ಬಿ ಪಾಟೀಲ್‌ರನ್ನ ಸಮಾಧಾನಗೊಳಿಸಲು ನಾಯಕರು ಇನ್ನಿಲ್ಲದ ಪ್ರಯತ್ನ ಮುಂದುವರೆಸಿದ್ದಾರೆ. ಸದಾಶಿವನಗರದ ಎಂಬಿಪಿ ನಿವಾಸಕ್ಕೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ. ಎಂ.ಬಿ ಪಾಟೀಲ್ ಪತ್ನಿ  ಆಶಾ ಪಾಟೀಲ್ ಜೊತೆ‌ ಸಚಿವ ರಮೇಶ್ ಜಾರಕಿ ಹೊಳಿ ಚರ್ಚೆ ನಡೆಸಿದ್ದಾರೆ. ಎಂ.ಬಿ ಪಾಟೀಲ್‌ ಮನವೊಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.

‘ಮೇಡಂ ನೀವಾದ್ರೂ ಹೇಳಿ’

‘ಎಂ.ಬಿ ಪಾಟೀಲ್‌ಗೆ ಹೇಳಿ, ಎರಡನೇ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಅವರಿಗೆ ಸ್ಥಾನ ಸಿಗಲಿದೆ. ಯಾವುದೇ ದುಡುಕಿನ‌ ನಿರ್ಧಾರವನ್ನು ಕೈ ಗೊಳ್ಳದಂತೆ ಎಂಬಿಪಿಯವರಿಗೆ ನೀವಾದ್ರೂ ತಿಳಿಸಿ’ ಎಂದಿರುವ ರಮೇಶ್ ಜಾರಕಿ ಹೊಳಿ‌ ಆಶಾ ಪಾಟೀಲ್‌ಗೆ ಮನವಿ ಮಾಡಿದ್ದಾರೆ.

ಸದ್ಯ ಮಾಜಿ ಸಚಿವ ಬಿ.ಎಸ್ ಪಾಟೀಲ್ ಸಾಸನೂರು ಅಂತ್ಯಕ್ರಿಯೆಗಾಗಿ ವಿಜಯಪುರಕ್ಕೆ ತೆರಳಿದ್ದಾರೆ.  ಭೇಟಿ ಬಳಿಕ ಮಾತನಾಡಿದ ರಮೇಶ್‌ ಜಾರಕಿಹೊಳಿ ಪಕ್ಷದಲ್ಲಿ ಎಲ್ಲವೂ ಸರಿಯಿದೆ. ಯಾರೂ ಅತೃಪ್ತರಿಲ್ಲ ಎಂದು ಪುನರುಚ್ಛರಿಸಿದ್ದಾರೆ.

ಎಂ.ಬಿ ಪಾಟೀಲ್ ನಮ್ಮ‌ ಪ್ರಭಾವಿ ನಾಯಕರು. ನೀರಾವರಿಯಲ್ಲಿ‌ ಹೆಚ್ಚು ಕೆಲಸ ಮಾಡಿದ್ದಾರೆ. ಭಿನ್ನಮತ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡುತ್ತೇವೆ. ಅವರಿಗೆ ಒಳ್ಳೆಯದಾಗುತ್ತದೆ. ಪಕ್ಷದಲ್ಲಿ ಯಾವ ಅತೃಪ್ತರ ಸಭೆಯೂ ಇಲ್ಲ. ಇಂದು ಪಕ್ಷದ ನಿಷ್ಠಾವಂತರ ಸಭೆ ನಡೆಯಲಿದೆ. ಭೈರತಿ ಬಸವರಾಜು ಸಭೆ ಕರೆದಿದ್ದಾರೆ. ಅಲ್ಲಿಗೆ ನಾವೂ ‌ಹೋಗ್ತೇವೆ. ಪಕ್ಷ ಬಲಪಡಿಸುವ ಉದ್ದೇಶದಿಂದ ಆ ಸಭೆ ನಡೆಯಲಿದೆ.

– ರಮೇಶ್‌ ಜಾರಕಿಹೊಳಿ