ರಾಜ್ಯದಲ್ಲಿ ಲಿವಿಂಗ್ ಟುಗೆದರ್ ಸರ್ಕಾರವಿದೆ: ಸಿ.ಟಿ ರವಿ

ಬಳ್ಳಾರಿ: ರಾಜ್ಯದಲ್ಲಿ ಲಿವಿಂಗ್ ಟುಗೆದರ್ ಸರ್ಕಾರ ಇದೆ. ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಎರಡು ಪಕ್ಷಗಳು ಲಿವಿಂಗ್ ಟುಗೆದರ್ ಸಂಬಂಧ ಬೆಳೆಸಿಕೊಂಡಿವೆ ಅಂತಾ ಬಿಜೆಪಿ ಶಾಸಕ ಸಿ.ಟಿ ರವಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸರ್ಕಾರದ್ದು ಅರೇಂಜ್ ಮ್ಯಾರೇಜ್ ಅಲ್ಲ. ಇದು ಹಳಸಿದವರ ಮತ್ತು ಹಸಿದವರ ಸರ್ಕಾರ. ಹೀಗಾಗಿ ಇದು ಬಹಳ ದಿನ ಇರೋದಿಲ್ಲ ಎಂದರು. ನಾನು ಪ್ರಧಾನ ಮಂತ್ರಿಯಲ್ಲ, ಪ್ರಧಾನ ಸೇವಕ ಎನ್ನುವ ಮೂಲಕ ಪ್ರಧಾನ ಮಂತ್ರಿ ಹುದ್ದೆಗೆ ನರೇಂದ್ರ ಮೋದಿ ಅವರು ಹೊಸ ಭಾಷ್ಯ ಬರೆದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ದೇಶಕ್ಕೆ ಹಿರಿಮೆ ತಂದು ಕೊಟ್ಟ ಸರ್ಕಾರ ಮೋದಿ ಸರ್ಕಾರ. ನೋಟು ಅಮಾನ್ಯದಿಂದ ದೇಶದಲ್ಲಿ ಆರ್ಥಿಕ ಶಿಸ್ತು ಬಂದಿದೆ. ಕಪ್ಪು ಹಣದ ಚಲಾವಣೆಗೆ ನಿಯಂತ್ರಣ ಬಂದಿದೆ. ಹತ್ತು ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿ ಸಾಧಿಸಿದ್ದೇವೆ ಎಂದರು. ತ್ರಿವಳಿ ತಲಾಖ್ ಕಾಯ್ದೆ ಮುಸ್ಲಿಂ ಮಹಿಳೆಯ ಬದುಕಲ್ಲಿ ಸಾಕಷ್ಟು ಸುಧಾರಣೆ ಮತ್ತು ನೆಮ್ಮದಿ ತಂದಿದೆ ಎಂದರು.
ಇದೇ ವೇಳೆ ಮಾತನಾಡಿದ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್, ಕಲಂ 371(ಜೆ) ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹೈ-ಕ ಭಾಗದಲ್ಲಿ ಭರವಸೆಗಳು ಹೆಚ್ಚಾಗಿದ್ದು, ಅನುಷ್ಠಾನ ಕಡಿಮೆ ಆಗಿವೆ. ಯುವಜನರು ಉದ್ಯೋಗಕ್ಕಾಗಿ ಹೊರರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv