ಸಮ್ಮಿಶ್ರ ಸರ್ಕಾರ ಅಂದ್ಮೇಲೆ ಗೊಂದಲಗಳು ಸಹಜ: ಬಿ.ಕೆ ಹರಿಪ್ರಸಾದ್​​

ಬಾಗಲಕೋಟೆ: ಸಮ್ಮಿಶ್ರ ಸರ್ಕಾರ ಅಂದ ಮೇಲೆ ಚರ್ಚೆಗಳು, ಗೊಂದಲಗಳು ಸಾಮಾನ್ಯ ಅಂತಾ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್​​ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್​​, ಗೊಂದಲಗಳನ್ನು ಬಗೆಹರಿಸಲು ಸಮನ್ವಯ ಸಮಿತಿ ಇದೆ ಎಂದರು. ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲಿವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ಯಾರಾದರೂ ಪ್ರಧಾನಿಯಾಗಲಿ. ಆದರೆ ಬಿಜೆಪಿ ಪಕ್ಷದವರು ಪ್ರಧಾನಿಯಾಗಬಾರದು ಎಂದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಧ್ಯಕ್ಷ ಸ್ಥಾನದ ರೇಸ್​ನಲ್ಲಿದ್ದ ಹರಿಪ್ರಸಾದ್,​​ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ರಾಹುಲ್ ಗಾಂಧಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

‘ಸದಾನಂದಗೌಡ ಓರ್ವ ರಾಜಕೀಯ ಪಂಡಿತ..!’
ಬಿಎಸ್​ವೈ ಸಿಎಂ ಆಗ್ತಾರೆ ಎನ್ನುವ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್,​​ ಸ್ವಾಮೀಜಿಗಳ ಹೇಳಿಕೆ ಬಗ್ಗೆ ನಾನು ಮಾತನಾಡೋದಿಲ್ಲ. ಸ್ವಾಮೀಜಿಗಳು ಅವರ ಅನಿಸಿಕೆ ಹೇಳಿದ್ದಾರೆ. ರಾಜಕಾರಣಿಗಳು ಹೇಳಿದ್ದರೆ ನಾನು ಉತ್ತರ ಕೊಡುತ್ತಿದ್ದೆ ಎಂದರು. ಸದಾನಂದಗೌಡ ಓರ್ವ ರಾಜಕೀಯ ಪಂಡಿತ, ಭವಿಷ್ಯ ನುಡಿತಕ್ಕಂತವರು. ಅವರ ಭವಿಷ್ಯ ಏನಾಗುತ್ತದೆ ಅಂತಾ ಎಲ್ಲರೂ ನೋಡಿದ್ದಾರೆ ಅಂತಾ ಕೇಂದ್ರ ಸಚಿವರ ವಿರುದ್ಧ ವ್ಯಂಗ್ಯವಾಡಿದರು.
ನಿಗಮ ಮಂಡಳಿ ಸ್ಥಾನಗಳನ್ನು ಮೊದಲನೇ ಹಂತದಲ್ಲಿ ಹಿರಿಯ ಶಾಸಕರಿಗೆ ಕೊಡುವ ತೀರ್ಮಾನ ಮಾಡಲಾಗಿದೆ. ಉಳಿದಂತೆ ಪ್ರಮುಖ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ತಿಳಿಸಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv