ದಚ್ಚು ಸೆರೆ ಹಿಡಿದ ಅದ್ಭುತ ಫೋಟೋ ಖರೀದಿಸಿದ ಚಿಕ್ಕು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆರೆ ಹಿಡಿದಿದ್ದ ಕಾಡಾನೆಯ ಫೋಟೋವನ್ನು, ಕನ್ನಡ ಚಿತ್ರರಂಗದ ಹಾಸ್ಯ ನಟ ಚಿಕ್ಕಣ್ಣ ಬರೋಬ್ಬರಿ 1 ಲಕ್ಷ ರೂಪಾಯಿ ಹಣ ಕೊಟ್ಟು ಖರೀದಿಸಿದ್ದಾರೆ. ನಟ ದರ್ಶನ್ ತಿಂಗಳ ಹಿಂದೆಯಷ್ಟೇ ಫೋಟೊಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಿದ್ದರು. ಇದರಿಂದ ಬಂದ ಹಣವನ್ನು ಫಾರೆಸ್ಟ್ ವಾಚರ್ಸ್ ಕ್ಷೇಮಾಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು. ಇದೀಗ ಚಿಕ್ಕಣ್ಣ ಒಂದು ಲಕ್ಷ ರೂಪಾಯಿ ನೀಡಿ ಬೃಹತ್ ಫೋಟವೊಂದನ್ನು ಖರೀದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖುಷಿಯಿಂದ ಟ್ವೀಟ್ ಮಾಡಿರೋ ದರ್ಶನ್, ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ ನಮ್ಮ ಚಿಕ್ಕಣ್ಣ 1 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಜ್ಞತೆ ಎಂದು ದಚ್ಚು ಟ್ವೀಟ್​ ಮಾಡಿದ್ದಾರೆ.

ದರ್ಶನ್​ ಫೊಟೋಗ್ರಾಫಿ ಕ್ರೇಜ್..!
ಚಾಲೆಂಜಿಂಗ್ ಸ್ಟಾರ್ ದರ್ಶನ್​ ಫೊಟೋಗ್ರಾಫಿ ಕ್ರೇಜ್​ ಎಲ್ಲರಿಗೂ ಗೊತ್ತಿರುವಂಥದ್ದೇ. ಸ್ವಲ್ಪ ಟೈಂ ಸಿಕ್ಕರೆ ಸಾಕು ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಕಾಡಿನತ್ತ ಸಾಗಿ ಬಿಡ್ತಾರೆ ದರ್ಶನ್. ಅಲ್ಲದೇ ಅಷ್ಟೇ ಶ್ರದ್ಧೆಯಿಂದ, ತಾಳ್ಮೆಯಿಂದ ಕಾದು ಕುಳಿತು ವನ್ಯಜೀವಿಗಳ ಜೀವನವನ್ನು ತಮ್ಮ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆ ಹಿಡಿಯುತ್ತಾರೆ. ಹಾಗೆ ಸೆರೆ ಹಿಡಿದ ಫೋಟೋಗಳನ್ನು ಮಾರಾಟ ಮಾಡುವ ದರ್ಶನ್, ಅದ್ರಿಂದ ಬರುವ ಹಣವನ್ನು ಅರಣ್ಯ ಇಲಾಖೆಯ ಕ್ಷೇಮಾಭಿವೃದ್ಧಿಗೆ ಮುಡಿಪಾಗಿ ಇಡ್ತಾರೆ. ಚಿಕ್ಕಣ್ಣ ನೀಡಿರುವ 1 ಲಕ್ಷ ರೂಪಾಯಿ ಹಣವನ್ನೂ ದಚ್ಚು ಅರಣ್ಯ ಇಲಾಖೆಗೇ ನೀಡಲಿದ್ದಾರೆ.