ಮೈದುಂಬಿಕೊಂಡ ಜೋಗ, ಭೋರ್ಗರೆಯುತ್ತಿವೆ ರಾಜಾ, ರಾಣಿ, ರೋರರ್, ರಾಕೆಟ್​​​..!

ಶಿವಮೊಗ್ಗ: ಮಲೆ ನಾಡಿನಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಶ್ವ ವಿಖ್ಯಾತ ಜೋಗ ಜಲಪಾತ, ಮೈ ತುಂಬಿಕೊಂಡು ಹರಿಯುತ್ತಿದೆ. ರಾಜಾ, ರಾಣಿ, ರೋರರ್, ರಾಕೆಟ್​​​ ಘರ್ಜಿಸುತ್ತಾ ಭೋರ್ಗರೆಯುತ್ತಿವೆ. ಮಳೆಯಿಲ್ಲದೇ ಸೊಣಕಲು ಕಡ್ಡಿಯಂತಾಗಿದ್ದ ಜೋಗ ಜಲಪಾತ ಮತ್ತೆ ಮೈದುಂಬಿಕೊಂಡಿದೆ. ಹೀಗಾಗಿ ಮಾನವನಾಗಿ ಹುಟ್ಟಿದ ಮೇಲೆ ಏನೇನ್​ ಕಂಡಿ, ಸಾಯೋತನಕ ಸಂಸಾರದಾಗ ಗಂಡಾ ಗುಂಡಿ, ಹೇರಿಕೊಂಡು ಹೋಗೋದಿಲ್ಲ ಸತ್ತಾಗ ಬಂಡಿ, ಸಾಯೊದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ ಅಂತಾ ಪ್ರವಾಸಿಗಲು ದಾಂಗುಡಿಯಿಡಲು ಆರಂಭಿಸಿದ್ದಾರೆ.

ಮುಂಗಾರು ಮಳೆ ಸತತ ಸುರಿದ ಹಿನ್ನೆಲೆ ಲಿಂಗನಮಕ್ಕಿ ಹಾಗೂ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಜಲಪಾತದ ಆಕರ್ಷಣೆಯಾದ ರಾಜ, ರಾಣಿ, ರೋರರ್​​ ಮತ್ತು ರಾಕೆಟ್ ಝರಿಗಳು ಸುಮಾರು 900 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಹಾಲಿನ ನೊರೆಯಿಂದ ಕೂಡಿರುವ ಜೋಗವನ್ನು ಕಣ್ ತುಂಬಿಕೊಳ್ಳುಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಮಳೆಯನ್ನೂ ಲೆಕ್ಕಿಸದೆ ಸಂಭ್ರಮಿಸಲು ಆಗಮಿಸುತ್ತಿದ್ದಾರೆ. ಜೋಗದಲ್ಲಿ ನೀರು ಹೆಚ್ಚಾಗಿರೋದ್ರಿಂದ ಪ್ರವಾಸಿಗರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜೋಗ ಜಲಪಾತ ಅರ್ಭಟಕ್ಕೆ ಪ್ರವಾಸಿಗರು ನಲಿಯುತ್ತಿದ್ದಾರೆ. ಇನ್ನು ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಪ್ರದೇಶದಲ್ಲಿ 76.40 ಮೀ.ಮೀ.ಮಳೆಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv