ತೆಂಗಿನ ಹಾಲಿನ ಮಿಱಕಲ್​ ನಿಮಗೆ ಗೊತ್ತಾ..?

ವೈದ್ಯಕೀಯ ಪ್ರಪಂಚದಲ್ಲಿ ‘ಮಿಱಕಲ್​ ಲಿಕ್ವಿಡ್’​ ಅಂತಾನೇ ಕರೆಸಿಕೊಳ್ಳೋ ತೆಂಗಿನ ಹಾಲು ಬಲು ರುಚಿ ಅಂತಾ ನಮಗೆಲ್ಲಾ ಗೊತ್ತು. ‘ಇಂಗು ತೆಂಗು ಇದ್ರೆ ಪುಟ್ಟಕ್ಕನ ಅಡಿಗೇನೂ ಚೆಂದ’ ಅಂತಾ ಮನೇಲಿ ಅಜ್ಜಿ ಯಾವಾಗ್ಲೂ ಹೇಳ್ತಿರ್ತಾರೆ ಅಲ್ವಾ? ತೆಂಗೊಂದಿದ್ರೆ ಅಡಿಗೆ ಮೃಷ್ಟಾನ್ನ. ಇನ್ನು ತೆಂಗಿನ ಹಾಲು ಅಂದ್ರೆ ಸೌತ್​ ಇಂಡಿಯನ್ಸ್​ಗೇನೂ ಹೊಸದಲ್ಲ. ಹಾಲು ಪೂರ್ತಿ ಕ್ರೀಮ್​ ಅನ್ನೇ ತುಂಬಿಕೊಂಡು, ರುಚಿಯಲ್ಲಿ ಸ್ವಲ್ಪ ಸಿಹಿಯಾಗಿರೋ ಕಾಯಿ ಹಾಲಿನ ಸವಿರುಚಿ ಸವಿದವರೇ ಹೇಳಬಲ್ಲರು. ಹೋಳಿಗೆಗೆ ತೆಂಗಿನ ಹಾಲು ಹಾಕಿಕೊಂಡು ಸವಿದರೆ..ಆಹಾ.. ಅದೆಷ್ಟು ರುಚಿ ಅಂತಾ ನಮಗೆಲ್ಲರಿಗೂ ಗೊತ್ತು. ಇದು ಕೇವಲ ರುಚಿ ಮಾತ್ರವಲ್ಲದೆ ಹೇರಳವಾಗಿ ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ಈಗಿನ ಬಿಪಿ.. ಶುಗರ್.. ಕೊಲೆಸ್ಟ್ರಾಲ್..​ ಯುಗದಲ್ಲಿ ತೆಂಗನ್ನು ದೂರ ಇಡೋರೇ ಹೆಚ್ಚು. ತೆಂಗಿನಕಾಯಿ ನಾವು ಬಳಸೋದೇ ಇಲ್ಲಪ್ಪ.. ಅದು ಕೊಲೆಸ್ಟ್ರಾಲ್.. ಅಂತಾ ಹೇಳೋರೇ ಹೆಚ್ಚು. ಆದ್ರೆ ಡಾಕ್ಟರ್ಸ್ ಏನು ಹೇಳ್ತಾರೆ ಅಂತಾ ಕೇಳಿ.

ತೆಂಗಿನ ಹಾಲು, ತಾಯಿ ಹಾಲಿಗೆ ಸಮಾನ

ಪ್ರಪಂಚದಲ್ಲಿ ತಾಯಿ ಹಾಲಿಗೆ ಸಮನಾದದ್ದು ಯಾವುದೂ ಇಲ್ಲ ಅಂತಾ ಕೇಳಿದ್ವಿ ಅಲ್ವಾ..? ಆದರೆ 1964ರಲ್ಲೇ, ತೆಂಗು ತಾಯಿ ಹಾಲಿಗೆ ಸಮಾನ ಅಂತಾ ಹೃದಯ ತಜ್ಞ ಡಾ.ಬಿ.ಎಂ.ಹೆಗ್ಡೆ ಹೇಳಿದ್ರು. ತೆಂಗಿನಲ್ಲಿ ತಾಯಿ ಎದೆ ಹಾಲಲ್ಲಿ ಇರುವ ‘ಸೋಡಿಯಂ ಮೋನೋಲೋರಿಕ್​ ಆ್ಯಸಿಡ್’ ಇದ್ದು, ಇದು ಫ್ಯಾಟ್​ಗಳಲ್ಲೇ ‘ಬೆಸ್ಟ್ ಫ್ಯಾಟ್’ ಅಂತಾರೆ ವೈದ್ಯರು. ಯಾಕಪ್ಪ ಇದು ಬೆಸ್ಟ್​ ಫ್ಯಾಟ್​ ಅಂದ್ರೆ, ಇದು ಹೊಟ್ಟೆಗೆ ಹೋಗುವ ಮೊದಲೇ ಬಾಯಲ್ಲಿನ ಲಾಲಾರಸ(ಸಲೈವ) ಜೊತೆ ಸೇರಿನೇ ಕರಗಿ ಹೋಗುತ್ತಂತೆ. ಹಾಗಾಗಿ ತಾಯಿ ಹಾಲು ಸಿಗದ ಹಸುಗೂಸಿಗೆ ತೆಂಗಿನಹಾಲನ್ನು ಮಾತ್ರವೇ ಕೊಡಬಹುದಂತೆ. ಹಸುಗೂಸಲ್ಲಿ ಜೀರ್ಣಶಕ್ತಿಗೆ ಬೇಕಾಗುವ ‘ಪ್ಯಾನ್​ಕ್ರಿಯಾಟಿಕ್​ ಜ್ಯೂಸ್’​ ಇರುವುದಿಲ್ಲವಾದರೂ, ತೆಂಗಿನಹಾಲು ಜೀರ್ಣವಾಗಿ ಮಗುವಿಗೆ ಆಹಾರವಾಗಬಲ್ಲದು ಅಂತಾರೆ ಹೆಗ್ಡೆಯವರು. ಇಷ್ಟೆಲ್ಲಾ ಸ್ಪೆಷಲ್​ ಗುಣಗಳನ್ನು ಹೊಂದಿರುವ ತೆಂಗಿನ ಹಾಲನ್ನು ಹೇಗೆ ತೊಗೋಬೇಕು ಮತ್ತೆ ಅದು ಆರೋಗ್ಯಕ್ಕೆ ಹೇಗೆಲ್ಲಾ ಸಹಾಯಕ ಅಂತಾ ನೋಡೋಣ ಬನ್ನಿ.

ತೆಂಗಿನ ಹಾಲು ಎಷ್ಟು ತೊಗೋಬೇಕು..?

ಫ್ರೆಷ್​ ತೆಂಗಿನ ತುರಿಗೆ ಸ್ವಲ್ಪ ನೀರು ಹಾಕಿ, ಮಿಕ್ಸಿಯಲ್ಲಿ ರುಬ್ಬಿ ತೆಗೆದ, ಗಟ್ಟಿಯಾದ ತೆಂಗಿನ ಹಾಲನ್ನು ¼ ಅಥವಾ ½ ಕಪ್​ ಪ್ರತಿದಿನದಲ್ಲಿ ತೆಗೆದುಕೊಳ್ಳಬಹುದು. ಹೆಚ್ಚು ಕ್ಯಾಲೊರಿ ಹೊಂದಿರೋದ್ರಿಂದ ಕಡಿಮೆ ಕ್ವಾಂಟಿಟಿಯಲ್ಲಿ ಇದನ್ನು ತೆಗೆದುಕೊಳ್ಳೋದು ಹೆಚ್ಚು ಸೂಕ್ತ ಅಂತಾರೆ ವೈದ್ಯರು. ¼ ಲೋಟ ಫುಲ್​ಫ್ಯಾಟ್​ ತೆಂಗಿನಹಾಲಲ್ಲಿ ಎಷ್ಟೆಲ್ಲಾ ಅಂಶಗಳಿವೆ ನೋಡಿ.

 • 138 ಕ್ಯಾಲೊರಿ
 • 5 ಗ್ರಾಂ ಪ್ರೊಟೀನ್​
 • 2 ಗ್ರಾಂ ಶುಗರ್​
 • 14 ಗ್ರಾಂ ಫ್ಯಾಟ್​
 • 55 ಮಿಲಿಗ್ರಾಂ ಮ್ಯಾಂಗನೀಸ್​
 • 15 ಮಿಲಿಗ್ರಾಂ ಕಾಪರ್​
 • 60 ಮಿಲಿಗ್ರಾಂ ಫಾಸ್​ಪರಸ್​
 • 22 ಮಿಲಿಗ್ರಾಂ ಮೆಗ್ನೀಸಿಯಂ
 • 9 ಮಿಲಿಗ್ರಾಂ ಐರನ್​
 • 157 ಮಿಲಿಗ್ರಾಂ ಪೊಟ್ಯಾಸಿಯಂ

ಉಪಯೋಗಗಳು ಏನು..?

 1. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹಕ್ಕೆ ಇಮ್ಯುನಿಟಿ ಕೊಡುತ್ತೆ. ಈ ಮೂಲಕ ರೋಗಗಳನ್ನು ತಡೆಗಟ್ಟುತ್ತೆ.
 2. ತೆಂಗಿನ ಹಾಲು ಖಂಡಿತಾ ಕೊಲೆಸ್ಟ್ರಾಲ್​ ಜಾಸ್ತಿ ಮಾಡಲ್ಲ ಅಂತಾರೆ ವೈದ್ಯರು. ಆಶ್ಚರ್ಯ ಅಂದ್ರೆ ತೆಂಗಿನ ಹಾಲನ್ನು ನಿಯಮಿತವಾಗಿ ತೊಗೋಳೋದ್ರಿಂದ ಕೊಲೆಸ್ಟ್ರಾಲ್​(LDL) ಕಡಿಮೆ ಮಾಡಿ, ಬಿಪಿ ಕಂಟ್ರೋಲ್​ ಮಾಡುತ್ತದೆ.
 3. ರಕ್ತಕ್ಕೆ ಸಕ್ಕರೆ ಅಂಶ ಬಿಡುಗಡೆಯಾಗುವುದನ್ನು ತೆಂಗಿನ ಫ್ಯಾಟ್​ ಕಂಟ್ರೋಲ್​ ಮಾಡುತ್ತದೆ. ಹೀಗೆ ಶುಗರ್​ ಲೆವೆಲ್ ಅನ್ನು​ ಕೂಡ ಕಂಟ್ರೋಲ್​ ಮಾಡುತ್ತದೆ.
 4. ತೆಂಗಿನ ಹಾಲಲ್ಲಿ 50% ಗೂ ಅಧಿಕ ಪ್ರಮಾಣದಲ್ಲಿ ಲೂರಿಕ್​ ಆ್ಯಸಿಡ್​ ಇದೆ. ಈ ಲೂರಿಕ್​ ಆ್ಯಸಿಡ್​ ಒಂದು ಪಾಸಿಟಿವ್​ ಫ್ಯಾಟ್​. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
 5. ಮಾಂಸಖಂಡಗಳಿಗೆ ಸ್ಟ್ರೆಂತ್​ ಬೇಕು ಅಂದ್ರೆ, ವ್ಯಾಯಾಮ ಮಾಡುವುದರ ಜೊತೆಗೆ ಪೋಷಕಾಂಶಗಳನ್ನೂ ದೇಹಕ್ಕೆ ಒದಗಿಸಬೇಕಾಗುತ್ತೆ. ತೆಂಗಿನಹಾಲಿನಲ್ಲಿ ಮೀಡಿಯಂ ಚೈನ್​ ಟ್ರೈಗ್ಲಿಸರೈಡ್​(MCT) ಇದ್ದು, ಇದು ಮಾಂಸಖಂಡಗಳ ಶಕ್ತಿಯನ್ನು ಹೆಚ್ಚಿಸುತ್ತದೆ.
 6. ಬ್ರೈನ್​ಗೆ ಶೀಘ್ರವಾಗಿ ಎನರ್ಜಿ ತಲುಪಿಸುತ್ತದೆ. ಹಾಗಾಗಿ ತೆಂಗಿನ ಹಾಲು ಕುಡಿಯಿರಿ, ಹೊಸ ಚೈತನ್ಯ ಪಡೆಯಿರಿ. ಆಲಸ್ಯ ಮತ್ತು ಸೋಮಾರಿತಕ್ಕೆ ಗುಡ್​ಬೈ ಹೇಳಿರಿ.
 7. ಜೀರ್ಣಾಂಗದ ಗೋಡೆಗಳನ್ನು ಆರೋಗ್ಯವಾಗಿರಿಸಿ, ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಮಲಬದ್ಧತೆ ಹೋಗಲಾಡಿಸುತ್ತದೆ.
 8. ಮೂಳೆಗಳ ಮತ್ತು ಕೀಲುಗಳ ಆರೋಗ್ಯ ಕಾಪಾಡುತ್ತದೆ.
 9. ಆಶ್ಚರ್ಯ ಅಂದ್ರೆ, ಯಾವುದಕ್ಕೂ ಬಗ್ಗದ ಹೊಟ್ಟೆಯ ಹುಣ್ಣಿಗೆ(ಅಲ್ಸರ್​) ತೆಂಗಿನಹಾಲು ರಾಮಬಾಣ ಅಂತಾ ವೈದ್ಯರು ಹೇಳ್ತಾರೆ. ಬೇರಾವುದೇ ಔಷಧಿಗಳಿಗಿಂತ 56% ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಂತೆ.
 10. ರಕ್ತಹೀನತೆಯಿಂದ ಉಂಟಾಗುವ ವೀಕ್​ನೆಸ್​ ಹೋಗಲಾಡಿಸುತ್ತದೆ.

ತೆಂಗಿನ ಹಾಲು ಸೌಂದರ್ಯ ವರ್ಧಕವೂ ಹೌದು..!

ಮಹಿಳೆಯರಿಗೆ ಚರ್ಮದ ಸೌಂದರ್ಯ ಯಾವಾಗಲೂ ಒಂದು ಸವಾಲು. ನಿಯಮಿತ ತೆಂಗಿನಹಾಲಿನ ಸೇವನೆಯಿಂದ ಚರ್ಮದ ನೀರಿನ ಅಂಶನ್ನು ಕಾಪಾಡಿ, ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

ವೆಯ್ಟ್ ಲಾಸ್​ ಮಾಡಿಕೊಳ್ಳಬೇಕು ಅಂತಾ ಪ್ಲಾನ್​ ಮಾಡ್ತಿರೋರಿಗೆ ತೆಂಗಿನಹಾಲು ತುಂಬಾ ಸಹಾಯ ಮಾಡುತ್ತದೆ. ಇದು ಹೆಚ್ಚು ಕ್ಯಾಲೊರಿ ಹೊಂದಿದ್ದು ದೇಹಕ್ಕೆ ಶಕ್ತಿ ನೀಡೋದಲ್ಲದೆ, ಹಸಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಊಟದ ಕ್ವಾಂಟಿಟಿ ಕಡಿಮೆ ಆಗಿ, ತೂಕ ಗಣನೀಯವಾಗಿ ಇಳಿದು ಹೋಗುತ್ತೆ.

ಇಷ್ಟೆಲ್ಲಾ ಒಳ್ಳೆದು ಮಾಡೋ ತೆಂಗಿನಹಾಲಿಂದ ರುಚಿ ರುಚಿಯಾದ ತಿನಿಸುಗಳನ್ನು ಮಾಡಬಹುದು. ಐಸ್​ಕ್ರೀಂ, ಪಾಯಸ, ಫ್ರೂಟ್​ಸಲಾಡ್​, ಕೇಕ್​.. ಅಲ್ಲದೇ ಕಾಫಿ ಕೂಡ ಮಾಡಬಹುದು. ಟೇಸ್ಟ್​ ಮಾಡಿ, ಆನಂದಿಸಿ.

ವಿಶೇಷ ಬರಹ: ಜಯಶ್ರೀ

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv