ಕೋಕಾಕೋಲ ಸಂಸ್ಥಾಪಕ ಮಾರ್ತಿದ್ರು ಶರಬತ್ತು, ಮೆಕ್​​ ಡೊನಾಲ್ಡ್ಸ್ ಸಂಸ್ಥಾಪಕ ಧಾಬಾ ನಡೆಸುತ್ತಿದ್ರು..!

ನವದೆಹಲಿ: ಕೋಕಾಕೋಲಾ ಸಂಸ್ಥಾಪಕ ಆರಂಭದಲ್ಲಿ ಅಮೆರಿಕದಲ್ಲಿ ಶರಬತ್ತು ವ್ಯಾಪಾರಿಯಾಗಿದ್ರಂತೆ. ಹಾಗೇ ಮೆಕ್ ಡೊನಾಲ್ಡ್ಸ್​ ಸಂಸ್ಥಾಪಕ ಡಾಭಾ ನಡೆಸುತ್ತಿದ್ದರಂತೆ. ಹೀಗಂತ ಹೇಳ್ತಿರೋದು ನಾವಲ್ಲ, ಅದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ. ಇಂದು ದೆಹಲಿಯಲ್ಲಿ ನಡೆದ ಒಬಿಸಿ ಸಮಾವೇಶದಲ್ಲಿ ಮಾತನಾಡುವಾಗ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

ಇಲ್ಲಿ ಎಲ್ಲರೂ ಕೋಕಾಕೋಲಾ ಸಂಸ್ಥೆ ಬಗ್ಗೆ ಕೇಳಿದ್ದೀರಲ್ವಾ? ಎಂದು ಮೊದಲಿಗೆ ರಾಹುಲ್ ಗಾಂಧಿ ಪ್ರಶ್ನಿಸಿದ್ರು. ಈಗ ಹೇಳಿ ಕೋಕಾಕೋಲಾ ಶುರು ಮಾಡಿದ್ದು ಯಾರು? ಅವರು ಏನಾಗಿದ್ರು? ಯಾರಿಗಾದ್ರೂ ಗೊತ್ತಾ? ಅಂತ ಪ್ರಶ್ನೆ ಹಾಕಿದ್ರು. ಇದಕ್ಕೆ ಅಲ್ಲಿದ್ದವರಿಂದ ಪ್ರತಿಕ್ರಿಯೆ ಬರುವ ಮುನ್ನವೇ ಅವರಾಗಿಯೇ ಉತ್ತರಿಸಿ, ನಾನು ಹೇಳ್ತೀನಿ. ಅವರು ಅಮೆರಿಕದಲ್ಲಿ ಶಿಕಂಜಿ ಮಾರುತ್ತಿದ್ದರು. ನೀರಿನಲ್ಲಿ ಸಕ್ಕರೆ ಮಿಕ್ಸ್​ ಮಾಡುತ್ತಿದ್ದರು ಎಂದು ಹೇಳಿದ್ರು. (ಶಿಕಂಜಿ ಅಂದ್ರೆ ಉತ್ತರ ಭಾರತ ಹಾಗೂ ಪಾಕಿಸ್ತಾನದಲ್ಲಿ ಫೇಮಸ್​ ಆಗಿರೋ​ ನಿಂಬೆ ಶರಬತ್ತು)

ಅವರ ಅನುಭವಕ್ಕೆ ಗೌರವ ಸಿಕ್ತು. ಅವರ ಸಾಮರ್ಥ್ಯವನ್ನ ಜನರು ಗೌರವಿಸಿದ್ರು. ಹೀಗಾಗಿ ಅವರು ಕೋಕಾಕೋಲಾ ಶುರುಮಾಡಿದ್ರು ಅಂತ ರಾಹುಲ್ ಗಾಂಧಿ ಹೇಳಿದ್ರು. ಅದೇ ರೀತಿ ಮೆಕ್​ ಡೊನಾಲ್ಡ್ಸ್​​ ಸಂಸ್ಥಾಪಕ ರೋಡ್​​ಸೈಡ್​​ ಡಾಭಾ ನಡೆಸುತ್ತಿದ್ದರು. ಭಾರತದಲ್ಲಿ ಅಂತಹ ಒಬ್ಬರಾದ್ರೂ ರೆಸ್ಟೊರೆಂಟ್​ ಮಾಲೀಕರನ್ನ ತೋರಿಸಿ ಎಂದು ರಾಹುಲ್ ಹೇಳಿದ್ರು. ನಾನು ಇಲ್ಲಿ ಹೇಳಲು ಬಯಸುತ್ತಿರೋದು ಏನಂದ್ರೆ ಭಾರತದಲ್ಲಿ ಅವಕಾಶಗಳು ಕಡಿಮೆ. ಇದರಿಂದ ಜನ ಯಶಸ್ಸು ಕಾಣ್ತಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿ ಅಲೂಗಡ್ಡೆ ಹಾಕಿದ್ರೆ ಚಿನ್ನ ಹೊರಬರುವ ಮಷಿನ್​​ ಬಗ್ಗೆ ಮಾತನಾಡಿದ್ರು. ಇನ್ನು ಅಮೇಥಿಯಲ್ಲಿ ಮಾಡಿದ್ದ ಭಾಷಣದಲ್ಲಿ ಆಲೂಗಡ್ಡೆ ಫ್ಯಾಕ್ಟರಿ ಬಗ್ಗೆ ಹೇಳಿದ್ರು. ಇದೀಗ ಕೋಕಾಕೋಲಾ ಕಂಪನಿ ಮಾಲೀಕ ಶಿಕಂಜಿ ಮಾರುತ್ತಿದ್ದರು ಅಂತ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಂಡ್ ಓಲ್ಡ್​ ಪಾರ್ಟಿ ಕಾಂಗ್ರೆಸ್​​ನ ಅಧ್ಯಕ್ಷ ಮತ್ತೇನು ಹೊಸ ಹೇಳಿಕೆ ನೀಡಬಹುದು ಅಂತಾ ಅವರ ಅಭಿಮಾನಿಗಳು ಕಾಯ್ತಾ ಇದ್ದಾರಂತೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv