11 ಈರುಳ್ಳಿಗಳನ್ನ ನುಂಗಿ, ಉಗುಳಿದ ನಾಗರಹಾವು..!

ಒಡಿಸ್ಸಾ: ಹಾವುಗಳು ಇಲಿ, ಕಪ್ಪೆಗಳನ್ನ ಹಿಡಿದು ತಿನ್ನುವುದು ಸಾಮಾನ್ಯ. ಹಾಗೇ ಮೊಟ್ಟೆಗಳನ್ನು ನುಂಗಿ ಅದನ್ನು ಉಗುಳಿರೋ ವಿಡಿಯೋಗಳನ್ನ ಕೂಡ ಇತ್ತೀಚೆಗೆ ನೋಡಿದ್ದೀವಿ. ಆದರೆ ನಾಗರಹಾವೊಂದು 11 ಈರುಳ್ಳಿಗಳನ್ನ ನುಂಗಿದ್ದ ಘಟನೆ ಒಡಿಶಾದ ಅಂಗುಲ್​ ಜಿಲ್ಲೆಯ ಚೆಂಡಿಪಡ ಗ್ರಾಮದಲ್ಲಿ ನಡೆದಿದೆ. ನಾಗರಹಾವು ಒಟ್ಟು 11 ಈರುಳ್ಳಿಗಳನ್ನು ನುಂಗಿದ್ದು, ಕೊನೆಯ ಎರಡು ಈರುಳ್ಳಿಗಳನ್ನು ಉಗುಳುವ ವೇಳೆ ಪ್ರತ್ಯಕ್ಷದರ್ಶಿಯೊಬ್ಬರು ಇದನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾರೆ.

ಗ್ರಾಮಸ್ಥರೊಬ್ಬರ ಮನೆಯಲ್ಲಿ ಹಾವು ಪತ್ತೆಯಾದ ಬಳಿಕ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದರು. ಉರಗ ತಜ್ಞ ಹಿಮಾಂಶು ಶೇಖರ್​​ ಕೂಡಲೇ ಸ್ಥಳಕ್ಕೆ ಬಂದಿದ್ದು, ಹಾವನ್ನು ರಕ್ಷಣೆ ಮಾಡುವಾಗ ಈ ಅಚ್ಚರಿಯ ಘಟನೆಯನ್ನು ಕಂಡು ಬೆರಗಾಗಿದ್ದಾರೆ. ಹಾವು ಏನನ್ನು ನುಂಗಿರಬಹುದು ಎಂದು ಯೋಚನೆ ಮಾಡುವಷ್ಟರಲ್ಲಿ ಈರುಳ್ಳಿಗಳನ್ನು ಉಗುಳಲು ಶುರುಮಾಡಿತು. ಆಗ ಇದೊಂದು ಅಪರೂಪದ ಘಟನೆ ಎಂದು ನನಗೆ ಅನ್ನಿಸಿತು. ಹೀಗಾಗಿ ನನ್ನ ಸ್ನೇಹಿತನಿಗೆ ಮೊಬೈಲ್​ ಕೊಟ್ಟು ವಿಡಿಯೋ ಮಾಡಲು ಹೇಳಿದೆ. ಕೊನೆಯ ಎರಡು ಈರುಳ್ಳಿ ಉಗುಳುವ ದೃಶ್ಯ ಮಾತ್ರ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ಹಿಮಾಂಶು ಹೇಳಿದ್ದಾರೆ.

ನಾಗರಹಾವುಗಳು ಸಹಜವಾಗಿ ಮಾಂಸಹಾರಿಯಾಗಿರುತ್ತವೆ. ಕೆಲವೊಮ್ಮೆ ಅವು ಹಣ್ಣು ಅಥವಾ ತರಕಾರಿಗಳನ್ನು ನುಂಗಬಹುದು. ಇದನ್ನು ಹರ್ಬಿವೋರಿ ಅಂತ ಕರೆಯಲಾಗುತ್ತದೆ. ಇದೊಂದು ವಿಚಿತ್ರ ವರ್ತನೆಯಾಗಿದ್ದು ಹಾವುಗಳಲ್ಲಿ ಜಡ್ಜ್​​ಮೆಂಟಲ್​ ಎರರ್​​ನಿಂದ ಈ ರೀತಿ ಆಗುತ್ತದೆ. ಹಾವು ಇಲಿಯ ವಾಸನೆಯನ್ನು ಗ್ರಹಿಸಿ ಅಥವಾ ತನ್ನ ಇತರೆ ಯಾವುದೇ ಬೇಟೆಯನ್ನ ಹಣ್ಣು ಅಥವಾ ತರಕಾರಿಯ ಮೇಲೆ ಗ್ರಹಿಸಿದಾಗ ಈ ರೀತಿ ಆಗುತ್ತದೆ ಎಂದು ಉರಗ ಸಹಾಯವಾಣಿಯ ಕಾರ್ಯದರ್ಶಿ ಸುಬೇಂಧು ಹೇಳಿದ್ದಾರೆ. ಇನ್ನು ಹಾವು 11 ಈರುಳ್ಳಿಗಳನ್ನ ನುಂಗಿರುವ ಪ್ರಕರಣ ವಿಶ್ವದಲ್ಲೇ ಇದೇ ಮೊದಲು ಎಂದಿದ್ದಾರೆ.

ಇತ್ತೀಚೆಗೆ ಉಡುಪಿಯಲ್ಲಿ ಹಾವೊಂದು 7 ಮೊಟ್ಟೆಗಳನ್ನ ನುಂಗಿ ಬಳಿಕ ಅದನ್ನು ಉಗುಳಿತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv