ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ‘ಟೈಂ ಬಾಂಬ್ ಫಿಕ್ಸ್​’ ಮಾಡಿದ್ದಾರೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಕೇಂದ್ರೀಕೃತ ರಾಜಕೀಯ ನಡೆಯುತ್ತಿದೆ. ಸಿದ್ದರಾಮಯ್ಯ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಅವರು ಇಂತಹದರಲ್ಲಿ ಎಕ್ಸ್‌ಪರ್ಟ್. ಮೇ 23ರ ನಂತರ ಸರ್ಕಾರ ಸ್ಫೋಟ ಮಾಡುತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿನ ಗೊಂದಲದಿಂದ ಜನ ಬೇಸತ್ತಿದ್ದಾರೆ. ಎಲ್ಲಾ ಶಕ್ತಿಗಳು ಸೇರಿ ಸಿಎಂ ಕುಮಾರಸ್ವಾಮಿಯನ್ನ ಕೆಳಗಿಳಿಸಲು ಪ್ರಯತ್ನಿಸುತ್ತಿವೆ‌. ಒತ್ತಾಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮದುವೆ ಆಗಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಈ ಒತ್ತಾಯದ ಮದುವೆ ಮುರಿದು ಹೋಗುತ್ತೆ. ಮೇ 23ರ ನಂತರ ರಾಜ್ಯದಲ್ಲಿ ಬದಲಾವಣೆ ಆಗುತ್ತೆ ಎಂದರು.

ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್, ಬಿಜೆಪಿ ಯಾವತ್ತೂ ಕಾಂಗ್ರೆಸ್​ಗೆ ವಿರುದ್ಧವಾಗಿದೆ. ಜೆಡಿಎಸ್ ಕಡೆಯಿಂದ ಮೊದಲು ರೆಸ್ಪಾನ್ಸ್ ಬರಲಿ, ಅವರ ನಿಲುವು ಏನೆಂದು ಹೇಳಲಿ ಎಂದರು.

ಲೋಕಸಭೆ ಚುನಾವಣೆಯಲ್ಲಿ  ದೇವೇಗೌಡರು, ಪ್ರಜ್ವಲ್, ನಿಖಿಲ್ ಸೋಲುತ್ತಾರೆ. ಜನರು ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿಯನ್ನು ಮನೆಗೆ ಕಳುಹಿಸುತ್ತಾರೆ. ಯಾರೋ ಹೇಳಿಕೆ ಕೊಟ್ಟರೆ ಅಸೆಂಬ್ಲಿ ವಿಸರ್ಜನೆ ಆಗಲ್ಲ. ಸಾಂವಿಧಾನಿಕ ಬಿಕ್ಕಟ್ಟಿನ‌‌ ಬಗ್ಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ತಾರೆ. ಸದ್ಯಕ್ಕೆ ಮಧ್ಯಂತರ ಚುನಾವಣೆ ನಡೆಯುವ ಪರಿಸ್ಥಿತಿ ಈಗಿಲ್ಲ ಅಂತಾ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv