ಮಗನದು ಹೇಡಿ ಕೃತ್ಯ, ನೈತಿಕ ಹೊಣೆ ಹೊತ್ತು ರಾಜಕೀಯ ನಿವೃತ್ತಿ -ಸಿ.ಎಂ.ಲಿಂಗಪ್ಪ

ರಾಮನಗರ: ಯುದ್ಧಕ್ಕೆ ಹೊರಟು ಪಲಾಯನ ಮಾಡೋದು ಹೇಡಿತನದ ಕೃತ್ಯ. ನನ್ನ ಮಗ ಇಂತಹ ಹೇಡಿ ಕೃತ್ಯವೆಸಗಿದ್ದಾನೆ. ಇದಕ್ಕೆ ನೈತಿಕ ಹೊಣೆ ಹೊತ್ತು ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಕಾಂಗ್ರೆಸ್‌ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದರು.
ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್​. ಚಂದ್ರಶೇಖರ್ ಕೊನೆಯ ಕ್ಷಣದಲ್ಲಿ ಕಣದಿಂದ ಹೊರಬಂದಿದ್ದರು. ತಾವು ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ರು.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಎಲ್​. ಚಂದ್ರಶೇಖರ್​ ತಂದೆ ಸಿ.ಎಂ.ಲಿಂಗಪ್ಪ, ಈ ತಾಲೂಕಿನ ಸ್ವಾಭಿಮಾನದ ಸಾವಿರಾರು ಮತದಾರರು ಆತನ ಜೊತೆಗಿದ್ದರು. ಆದ್ರೆ, ಆತ ಅವರ ನಂಬಿಕೆಗೆ ದ್ರೋಹವೆಸಗಿದ ಎಂದು ಮಗನ ಪರವಾಗಿ ಎದ್ದು ನಿಂತು ಕೈ ಮುಗಿದು ಕ್ಷಮೆಯಾಚಿಸಿದ್ರು. ನನ್ನ ಮಗ ಮಾಡಿದ ತಪ್ಪಿಗೆ ನೈತಿಕ ಹೊಣೆ ಹೊತ್ತು ಕ್ಷಮೆಯಾಚಿಸುತ್ತಿದ್ದೇನೆ. ಆತನಿಗೆ ಟಿಕೆಟ್ ನೀಡಿದವರಿಗೂ ಕ್ಷಮೆ ಕೇಳುತ್ತಿದ್ದೇನೆ. ಚುನಾವಣೆ ಎಂದರೆ ಒಂದು ಹೋರಾಟವಿದ್ದಂತೆ. ಯಾರೂ ಸಹ ಈ ಕೆಲಸ ಮಾಡಬಾರದು. ಮುಂದೆಯೂ ಇಂತಹ ಕೆಲಸಕ್ಕೆ ಯಾರೂ ಮುಂದಾಗಬಾರದು. ಯುದ್ಧಕ್ಕೆ ಹೊರಟು ಪಲಾಯನ ಮಾಡೋದು ಹೇಡಿತನದ ಕೃತ್ಯ. ನನ್ನ ಮಗ ಇಂತಹ ಹೇಡಿ ಕೃತ್ಯವೆಸಗಿರೋದು ನನಗೆ ಅವಮಾನವಾಗಿದೆ, ಈ ಘಟನೆಯಿಂದ ನೊಂದಿದ್ದೇನೆ. ಹೀಗಾಗಿ ರಾಜಕೀಯಕ್ಕೆ ವಿದಾಯ ಹೇಳುವೆ. ಎಂಎಲ್​ಸಿ ಅವಧಿ ಮುಗಿದ ಬಳಿಕ ರಾಜಕೀಯ ನಿವೃತ್ತಿ ಘೋಷಿಸುವೆ ಎಂದು ಸಿ.ಎಂ.ಲಿಂಗಪ್ಪ ಹೇಳಿದ್ರು.