’ನಿಖಿಲ್ ನಮ್ಮ ಮಗನಲ್ಲ, ಇನ್ಮುಂದೆ ನಿಮ್ಮ ಮಗ’: ಸಿಎಂ

ಮಂಡ್ಯ: ನಿಖಿಲ್ ನಮ್ಮ ಮಗನಲ್ಲ, ಇನ್ಮುಂದೆ ನಿಮ್ಮ ಮಗ. ರೈತರ ಜೊತೆ ನಿಖಿಲ್ ನಿರಂತರವಾಗಿ ಜೊತೆಯಲ್ಲಿರ್ತಾನೆ. ಮಂಡ್ಯ ರೈತರ ಜೊತೆಯಲ್ಲೇ ನಿಖಿಲ್ ಮುಂದಿನ ಜೀವನ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಪ್ರಚಾರ ಭಾಷಣದ ವೇಳೆ ಮಾತನಾಡಿದ ಕುಮಾರಸ್ವಾಮಿ, ನಾವೆಂದೂ ದುಡ್ಡಲ್ಲಿ ರಾಜಕಾರಣ ಮಾಡಿಲ್ಲ. ಅದನ್ನೆಲ್ಲ ನಂಬಬೇಡಿ.  ಕೀಳುಮಟ್ಟದ ಹೇಳಿಕೆಗಳಿಗೆ ಕಿವಿಗೊಡಬೇಡಿ ಎಂದರು. ದೇಶದ ಪ್ರಧಾನಿ ರೈತರ ಸಾಲಮನ್ನಾ ಬಗ್ಗೆ ಮಾತಾಡಲ್ಲ. ರಾಜ್ಯದ ರೈತರ ಬಗ್ಗೆ, ಕಾವೇರಿ ವಿಚಾರದಲ್ಲಿ ಸುದೀರ್ಘ ಹೋರಾಟ ಮಾಡಿದ್ರೆ ಅದು ಜೆಡಿಎಸ್ ಪಕ್ಷ ಮಾತ್ರ. ಹೇಮಾವತಿ, ಯಗಚಿ ಜಲಾಶಯ ನಿರ್ಮಾಣಕ್ಕೆ ದೇವೇಗೌಡರು ಕಾರಣ. ಕಾವೇರಿ ನ್ಯಾಯಾಧೀಕರಣದ ವಿರುದ್ಧ ನಿರಂತರ ಹೋರಾಟ ಮಾಡಿದ್ದೇವೆ. ಅದರ ಫಲವಾಗಿ ಇವತ್ತು 2 ಬೆಳೆಗೆ ನೀರು ಕೊಡ್ತಿದ್ದೇವೆ ಎಂದು ಹೇಳಿದ್ರು.

ನನ್ನ ಬಜೆಟ್ ಮಂಡ್ಯ ಬಜೆಟ್ ಅಂದ್ರು. ಅಂತಹ ಬಿಜೆಪಿ ಬೆಂಬಲವನ್ನ ಪಕ್ಷೇತರ ಅಭ್ಯರ್ಥಿ ಪಡೆದಿದ್ದಾರೆ. ನಾವು ಮಂಡ್ಯ ಅಭಿವೃದ್ಧಿ ಮಾಡ್ತೀವಾ? ಅವರು ಮಾಡ್ತಾರ   ಅನ್ನೋದನ್ನ ಜನರು ಯೋಚನೆ ಮಾಡಬೇಕಿದೆ ಎಂದರು.

ರೈತರ ಸಾಲಮನ್ನಾ ವಿಚಾರವಾಗಿ  ಕೆಲವರು ಭಾಷಣ ಮಾಡ್ತಾರೆ. ನೀತಿ ಸಂಹಿತೆ ಇರೋದ್ರಿಂದ ಪೂರ್ಣ ಪ್ರಮಾಣದ ಹಣ ಬಿಡುಗಡೆಯಾಗಿಲ್ಲ.  ಚುನಾವಣೆ ಹಿನ್ನೆಲೆಯಲ್ಲಿ ಆಯೋಗ ಬಾಕಿ ಹಣ ಬಿಡುಗಡೆ ಮಾಡದಂತೆ ಸೂಚಿಸಿದೆ.  ಚುನಾವಣೆ ಬಳಿಕ ಪೂರ್ಣ ಪ್ರಮಾಣದ ಸಾಲಮನ್ನಾ ಹಣ ಪಾವತಿಯಾಗಲಿದೆ ಎಂದು ಭರವಸೆ ನೀಡಿದ್ರು. ಮಹಿಳೆಯರಿಗೆ ಹಲವಾರು ಯೋಜನೆ ಕೊಟ್ಟಿದ್ದೇವೆ. ಯುವಕರಿಗೆ ಸಾಕಷ್ಟು ಯೋಜನೆ ತರ್ತಿದ್ದೇವೆ.  ಮಹಿಳೆಯರ ಒಡವೆ ಹರಾಜಾಗದಂತೆ ಗೃಹಲಕ್ಷ್ಮೀ ಸಾಲ ಯೋಜನೆ ತರ್ತಿದ್ದೇವೆ. ರೈತರಿಗೆ ಸಾಲಮನ್ನಾ ಜೊತೆಗೆ ಇನ್ನೂ ಹಲವು ಯೋಜನೆ ತಂದಿದ್ದೇವೆ. ಈ ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಗುರಿ. ನನ್ನ ಆರೋಗ್ಯದ ತೊಂದರೆಯಿಂದ ನಿಖಿಲ್ ಚುನಾವಣೆಗೆ ನಾನು ಕೆಲಸ ಕಡಿಮೆ ಮಾಡಲು ಇಲ್ಲಿನ ಶಾಸಕರು ತೀರ್ಮಾನಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ರು.

ಇನ್ನು ಸುಮಲತಾ ಬಗ್ಗೆ ಪರೋಕ್ಷವಾಗಿ ಕಿಡಿ ಕಾರಿದ ಸಿಎಂ, ಕೆಲವರ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಇವತ್ತು ಮಂಡ್ಯ ಜಿಲ್ಲೆಯ ಉದ್ಧಾರ ಮಾಡ್ತೀನಿ ಅಂತಾರೆ. ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿಗೆ ಹೋಗಿದ್ದರು? ನಾವೇನು ಮಂಡ್ಯ ಜನರ ಸ್ವಾಭಿಮಾನ ಎತ್ತಿ ಹಿಡಿಯುವಲ್ಲಿ ಕೆಲಸ ಮಾಡಿಲ್ವ? ಎಂದು ಪ್ರಶ್ನಿಸಿದ್ರು ಯಶಸ್ವಿನಿ ಯೋಜನೆ ನಾನು ನಿಲ್ಲಿಸಿದ್ದಲ್ಲ. ಹಿಂದಿನ ಸರ್ಕಾರ ನಿಲ್ಲಿಸಿದ್ದು. ಅದನ್ನು ಮುಂದೆ ಜಾರಿಗೆ ತರ್ತೀನಿ ಎಂದು ಇದೆ ವೇಳೆ ಕುಮಾರಸ್ವಾಮಿ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv