ಯೋಧ ಗುರು ಪತ್ನಿಗೆ ₹25 ಲಕ್ಷ ಪರಿಹಾರ ಚೆಕ್​ ನೀಡಿದ ಸಿಎಂ

ಮಂಡ್ಯ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯ ಗುಡಿಗೆರೆ ಕಾಲೋನಿ ವೀರಯೋಧ ಗುರು ಅವರ ಅಂತ್ಯಸಂಸ್ಕಾರ ಸ್ವಗ್ರಾಮದಲ್ಲಿ ನಡೆಯಿತು. ಅಂತ್ಯ ಸಂಸ್ಕಾರದ ವೇಳೆ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಸಿಎಂ ಕುಮಾರಸ್ವಾಮಿ  ಪತ್ನಿ ಕಲಾವತಿಗೆ ಹಸ್ತಾಂತರಿಸಿದರು. ಇದೇ ವೇಳೆ, ರಾಜ್ಯ ಸರ್ಕಾರದಿಂದ ಭರವಸೆ ನೀಡಿದ್ದ ₹25 ಲಕ್ಷ ಪರಿಹಾರವನ್ನು ಸಿಎಂ ಕುಮಾರಸ್ವಾಮಿ , ಡಿಸಿಎಂ ಡಾ.ಜಿ. ಪರಮೇಶ್ವರ್​​ ಸ್ಥಳದಲ್ಲೇ ನೀಡಿದರು. ನಿಮ್ಮ ಕುಟುಂಬದ ಜೊತೆ ಸದಾ ನಾವಿದ್ದೇವೆ ಎಂದು ವೀರಯೋಧ ಗುರು ಕುಟುಂಬಕ್ಕೆ ಸಿಎಂ, ಡಿಸಿಎಂ ಅಭಯ ನೀಡಿದರು. ವೀರಯೋಧ ಗುರು ಅವರ ಕುಟುಂಬಕ್ಕೆ ಗುರು ಅವರು ಒಬ್ಬರೇ ಆಧಾರಸ್ತಂಬವಾಗಿದ್ದರು. ಈಗಾಗಲೇ ಯೋಧ ಹುತಾತ್ಮ ಗುರು ಕುಟುಂಬಕ್ಕೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ. ಬಿಬಿಎಂಪಿ ವತಿಯಿಂದ ಮೇಯರ್​ ಗಂಗಾಬಿಂಕೆ ₹20 ಲಕ್ಷ ನೀಡುವ ಭರವಸೆ ನೀಡಿದ್ದರು. ರಾಜ್ರ ಸರ್ಕಾರ ₹25 ಲಕ್ಷ ಹಣದ ಜೊತೆಗೆ ಗುರು ಪತ್ನಿ ಕಲಾವತಿಗೆ ಸರ್ಕಾರಿ ಕೆಲಸದ ಭರವಸೆಯನ್ನೂ ನೀಡಿದ್ದಾರೆ.