ಶ್ರೀಲಂಕಾ ಸರಣಿ ಬಾಂಬ್ ದಾಳಿ, ನೊಂದವರಿಗೆ ನನ್ನ ಸಂತಾಪವಿದೆ: ಸಿಎಂ ಕುಮಾರಸ್ವಾಮಿ

ಉಡುಪಿ: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣ ನಡೆದಿರೋದು ಅತ್ಯಂತ ಮೃಗೀಯ ಘಟನೆ.  300ಕ್ಕೂ ಹೆಚ್ಚು ಜನರ ಹತ್ಯೆ  ನೋವಿನ ಘಟನೆ. ರಾಜ್ಯದ ಹಲವರ ಸಾವಾಗಿದೆ, ನೊಂದ ಕುಟುಂಬಗಳಿಗೆ ನನ್ನ ಸಂತಾಪವಿದೆ,  ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಿಎಂ ಕುಮಾರಸ್ವಾಮಿ  ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಶ್ರೀಲಂಕಾ ಸರಣಿ ಬಾಂಬ್ ಬ್ಲಾಸ್ಟ್​ನಲ್ಲಿ ನನ್ನ ಪಕ್ಷದ 5 ಜನ ನಾಯಕರು ಮೃತಪಟ್ಟಿದ್ದಾರೆ. ಅವರು ಪಕ್ಷದ ಆಧಾರ ಸ್ತಂಭಗಳು ಆಗಿದ್ದರು. ಪಕ್ಷದ ನಾಯಕರ ಸಾವು ಅವರ ಕುಟುಂಬಕ್ಕೆ ಆಘಾತ ತಂದಿದೆ. ಈ ಘಟನೆಯನ್ನ ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಶ್ರೀಲಂಕಾದಲ್ಲಿ ಮೃತಪಟ್ಟ ಹನುಮಂತರಾಯಪ್ಪ, ರಂಗಣ್ಣ, ಶಿವಣ್ಣ, ಲಕ್ಷ್ಮೀನಾರಾಯಣ, ರಮೇಶ್ ನನ್ನ  ಆತ್ಮೀಯರು. ಐವರು ನಮ್ಮ ಪಕ್ಷದ ಶಕ್ತಿಯಾಗಿದ್ದರು. ಅವರ ಸಾವಿನಿಂದ  ನೆಲಮಂಗಲದಲ್ಲಿ ಪಕ್ಷದ ಶಕ್ತಿ 50%ರಷ್ಟು ಕುಸಿತವಾಗಿದೆ.  ಘಟನೆ  ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದೆ. ಅವರು ಶ್ರೀಲಂಕಾ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಲ್ಲಿವರೆಗೂ 7 ಪಾರ್ಥಿವ ಶರೀರಗಳನ್ನ ಗುರುತಿಸಲಾಗಿದೆ.

ಇನ್ನು ಮೃತಪಟ್ಟವರ ಮರಣೋತ್ತರ ಪ್ರಕ್ರಿಯೆ ಶೀಘ್ರ ಮುಗಿಸಲು ಮನವಿ ಮಾಡಲಾಗಿದೆ. 24 ಗಂಟೆಯೊಳಗೆ ಮೃತರ ಶರೀರ ತರಿಸಿಕೊಳ್ಳಲು ಪ್ರಯತ್ನಿಸುತ್ತೇವೆ.  ಈ ಕುರಿತು ಕೃಷ್ಣಪ್ಪ, ಶ್ರೀನಿವಾಸ ಮೂರ್ತಿಗೆ ಎಂಬ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಖಾಸಗಿ ಏರ್ ಕಾರ್ ಕಾರ್ಗೋಗೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆಯೊಳಗೆ ಮೃತದೇಹಗಳು ಕರ್ನಾಟಕಕ್ಕೆ ಬರಬೇಕೆಂದು ನಿರಂತರ ಪ್ರಯತ್ನ ನಡೆಯುತ್ತಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv