ನಾನು ಕಾಂಗ್ರೆಸ್​​ ಕ್ಲರ್ಕ್​​ ಅಲ್ಲ, ಆರೂವರೆ ಕೋಟಿ ಜನರ ಕ್ಲರ್ಕ್..!

ಹಾಸನ: ನಾನು ಕಾಂಗ್ರೆಸ್ ಪಕ್ಷದ ಕ್ಲರ್ಕ್ ‌ಅಲ್ಲ, ಆರೂವರೆ ಕೋಟಿ ಜನರ ಕ್ಲರ್ಕ್. ರಾಜ್ಯದ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾಗೆ ತಿರುಗೇಟು ನೀಡಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು, ಅಮಿತ್ ಶಾ ರಾಷ್ಟ್ರೀಯ ಪಕ್ಷದವೊಂದರ‌ ಅಧ್ಯಕ್ಷರಾಗಿ ಹೀಗೆ ಮಾತನಾಡೋದು ಅವರಿಗೆ ಶೋಭೆ ಅಲ್ಲ ಎಂದು ಟಾಂಗ್​ ಕೊಟ್ಟರು. ನಿನ್ನೆ ರಾಜ್ಯ ಪ್ರವಾಸ ಮಾಡಿದ್ದ ಅಮಿತ್​​ಶಾ, ಕಾಂಗ್ರೆಸ್​​ ಹೇಳಿದ್ದಂತೆ ಸಿಎಂ ಕ್ಲರ್ಕ್​​ ಆಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್​​ ನೀಡುವ ಕೆಲಸಗಳನ್ನು ವಿಷಕಂಠನ್ನಾಗಿ ನುಂಗಿ ಸಿಎಂ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನತೆಗಾಗಿ ಸಿಎಂ ಕೆಲಸ ಮಾಡುತ್ತಿಲ್ಲ ಎಂದು ಅಮಿತ್​ ಶಾ ಆರೋಪಿಸಿದ್ದರು.

ಉಗ್ರರ ಪೈಶಾಚಿಕ ಕೃತ್ಯದ ಬಗ್ಗೆ ಮಾತನಾಡಿದ ಅವರು, ಉಗ್ರರ ದಾಳಿಗೆ 40ಕ್ಕೂ ಹೆಚ್ಚು ಯೋಧರು ವೀರ ಮರಣ ಹೊಂದಿದ್ದಾರೆ. ಈ ಘಟನೆ ನಡೆಯಬಾರದಿತ್ತು. ಇಂತಹ ದುಷ್ಟ ಶಕ್ತಿ‌ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ. ಮಂಡ್ಯ ಹುತಾತ್ಮ ಯೋಧ ಗುರು ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡುವ ಬಗ್ಗೆ ಪರಿಶೀಲನೆ ಮಾಡಲಾಗಿದೆ ಎಂದರು. ಶಾಸಕ ಪ್ರೀತಂಗೌಡ ಅವರನ್ನು‌ ಮುಗಿಸಲು ನಾವು ಸಂಚು ಮಾಡಿದ್ದೇವೆ ಅನ್ನೋದು ಸುಳ್ಳು. ಆದರೂ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಬಿಜೆಪಿಯವರ ಸಂಸ್ಕೃತಿ ತೋರಿಸುತ್ತದೆ. ಆಪರೇಷನ್ ಆಡಿಯೋ ಯಡಿಯೂರಪ್ಪ ಅವರದ್ದೇ ಅನ್ನೋದನ್ನು ಯಾರು‌ ಬೇಕಾದ್ರೂ ಹೇಳುತ್ತಾರೆ. ಈ ಬಗ್ಗೆ ಎಸ್​​ಐಟಿ ತನಿಖೆ ನಡೆಸುವ ಬಗ್ಗೆ ಶೀಘ್ರ ತೀರ್ಮಾನಿಸಲಾಗುವುದು. ಸರ್ಕಾರ ಕಲ್ಲು ಬಂಡೆ ರೀತಿ ‌ಇದೆ. ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv