ಅವ್ಯಾವೋ ಸಿನೆಮಾದವ್ರು ಈಗ ಸ್ವಾಭಿಮಾನದ ಬಗ್ಗೆ ಮಾತ್ನಾಡ್ತಿವೆ: ಸಿಎಂ ಕುಮಾರಸ್ವಾಮಿ

ಮಂಡ್ಯ: ಅವ್ಯಾವೋ ಸಿನೆಮಾದವು ಈಗ ಬಂದು ಸ್ವಾಭಿಮಾನದ ಬಗ್ಗೆ ಮಾತನಾಡುತ್ತಾರೆ ಅಂತಾ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ದರ್ಶನ್​ ಹಾಗೂ ಯಶ್​ ಅವರನ್ನ  ವ್ಯಂಗ್ಯವಾಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ರೈತರು ಆತ್ಮಹತ್ಯೆಗೆ ಶರಣಾದಾಗ ಯಾರು ಬಂದಿದ್ರು. ದೇಶದ ಇತಿಹಾಸದಲ್ಲಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಸೇನೆಯ ವಿಮಾನ ಕೊಡಲ್ಲ. ಅವತ್ತು ಈ ಅಭಿಮಾನಿಗಳು ಕೇಳಿಕೊಂಡರು ಎಂದು ಮಾಡಿದೆ. ಒಬ್ಬ ಮುಖ್ಯಮಂತ್ರಿ ಆಗಿ ನಾನು ಅಲ್ಲಿ ಕೂರಲಿಲ್ಲ, ಅಂತ ದರ್ದು ನನಗೇನಿತ್ತು. ನಾನು, ನಮ್ಮ ತಂದೆ ಕಣ್ಣಲ್ಲಿ ನೀರು ಹಾಕ್ತೇವೆ. ಜನರ ಸಮಸ್ಯೆ ನೋಡಿ ಕಣ್ಣಲ್ಲಿ ನೀರು ಬರುತ್ತೆ. ಆಸ್ಪತ್ರೆಯಲ್ಲಿ ಅನಾಥವಾಗಿದ್ದ ಹುಡುಗನನ್ನು -ನಿಖಿಲ್ ನೀನು ಅಣ್ಣ- ತಮ್ಮಂದಿರ ಜೊತೆ ಇರಿ ಎಂದಿದ್ದೆ. ಅಂಬರೀಶ್ ಪಾರ್ಥಿವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಹೋಗೋಣ ಅಂದ್ರೆ ಮಗನೊಂದಿಗೆ ಬೇಡ ಎಂದ ಮಹಾನ್ ತಾಯಿ, ಇವತ್ತು ಕಣ್ಣೀರು ಹಾಕಿ ಜನರ ಮುಂದೆ ಬಂದಿದ್ದಾರೆ ಅಂತಾ ಅವರು ಸುಮಲತಾ ಅಂಬರೀಶ್​ ಅವರನ್ನ ಕುಟುಕಿದರು.

ಇನ್ನು ನಾನು ಕಣ್ಣೀರು ಹಾಕೋದನ್ನ ನಿಲ್ಲಿಸಿದ್ದೆ. ಇವತ್ತು ಹೆಚ್. ವಿಶ್ವನಾಥ್ ಅವ್ರು ಕೆಲವು ಮಾತನ್ನ ಹೇಳಿದ್ರು. ಯಾರೂ ನಿನ್ನ ಕಷ್ಟ ಅರ್ಥ ಮಾಡಿಕೊಳ್ಳಲ್ಲ, ನಿನ್ನ ಪರಿಸ್ಥಿತಿ ಯೋಚನೆ ಮಾಡಲ್ಲ. ನಿನ್ನ ಆರೋಗ್ಯದ ಮೇಲೆ ಯಾವ ಪರಿಣಾಮ‌ ಬೀರಿದೆ ಅನ್ನೋದನ್ನ  ನೀನೇ ಯೋಚನೆ ಮಾಡಲ್ಲ ಅಂದಿದ್ರು. ಆ ಮಾತುಗಳು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ವು. ನೋವು ತಡೆಯಲಿಕ್ಕೆ ಆಗದೆ ನಾನು ಕಣ್ಣೀರು ಹಾಕಿದ್ದೇನೆ ಎಂದು ಭಾವುಕರಾಗಿ ಕಣ್ಣೀರು ಹಾಕುತ್ತಾ ಸಿಎಂ ಕುಮಾರಸ್ವಾಮಿ ಮಾತನಾಡಿದರು. ಇನ್ನು ನಾನು ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದವನು. ನಾನು ಶಿಕ್ಷಣ ಮುಗಿಸಿ ಸಿನಿಮಾ ವಿತರಕನಾಗಿ ನನ್ನ ಜೀವನ ನಡೆಸುತ್ತಿದ್ದೆ. ಅಚಾನಕ್ ಆಗಿ ರಾಜಕೀಯಕ್ಕೆ ಬಂದೆ. ಅಲ್ಲಿಂದ ಇಲ್ಲಿಯವರೆಗೇ ನನ್ನ ಮನೆ ಬಳಿ ಕಷ್ಟ ಹೇಳಿಕೊಂಡು ಬಂದವರ ಜಾತಿ ಧರ್ಮ ಕೇಳದೆ ಸಹಾಯ ಮಾಡಿದ್ದೇನೆ ಎಂದು ಸಿಎಂ  ಕುಮಾರಸ್ವಾಮಿ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv