ಆಪರೇಷನ್ ಕಮಲಕ್ಕೇ ಸಿಎಂ ಕುಮಾರಸ್ವಾಮಿ ಆಪರೇಷನ್​..?

‘ಆಪರೇಷನ್ ಕಮಲ’ದ ಸಪ್ಪಳ ರಾಜ್ಯದಲ್ಲಿ ಮತ್ತೆ ಜೋರಾಗಿದ್ದು, ಇದು ಸಮ್ಮಿಶ್ರ ಸರ್ಕಾರಕ್ಕೆ ನಡುಕ ಶುರುವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ನಾಯಕರು ಈಗ ಸಮ್ಮಿಶ್ರ ಸರ್ಕಾರವನ್ನ ಉರುಳಿಸಲು ಪ್ಲಾನ್ ರೂಪಿಸುತ್ತಿದ್ದಾರೆ. ಗೋಕಾಕ್ ಕಾಂಗ್ರೆಸ್​​ ಶಾಸಕ ರಮೇಶ್ ಜಾರಕಿಹೊಳಿ ಮೂಲಕವೇ ಆಪರೇಷನ್ ವ್ಯೂಹ ನಡೆಯಲಿದೆ ಅಂತಾ ಹೇಳಲಾಗ್ತಿದೆ. ಇದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ ಆಪರೇಷನ್​ ಕಮಲಕ್ಕೇ ಆಪರೇಷನ್ ಮಾಡಲು ಪ್ಲಾನ್ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ರಮೇಶ್ ಜಾರಕಿಹೊಳಿ ಮೂಲಕ ರಾಜ್ಯದಲ್ಲಿ ಆಪರೇಷನ್ ಕಮಲ ಮತ್ತೆ ಶುರುವಾಗುತ್ತೋ, ಇಲ್ಲವೋ ಅನ್ನೋದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ರಮೇಶ್ ಜಾರಕಿಹೊಳಿ ಅವರ ಇತ್ತೀಚೆಗಿನ ನಡೆಯನ್ನ ನೋಡಿದ್ರೆ, ರಾಜ್ಯ ರಾಜಕಾರಣದಲ್ಲಿ ಏನೋ ನಡೆಯುತ್ತಿದೆ ಅನ್ನೋದು ಸ್ಪಷ್ಟವಾಗುತ್ತಿದೆ. ರಾಮೇಶ್​ ಜಾರಕಿಹೊಳಿ ಆಗಾಗ ಕಾಂಗ್ರೆಸ್​ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ನಡೆದುಕೊಳ್ಳುತ್ತಿರುವ ರೀತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಸಮ್ಮಿಶ್ರ ಸರ್ಕಾರಕ್ಕೆ ಆತಂಕ ಕೂಡ ಸೃಷ್ಟಿ ಮಾಡಿದೆ.

ಹೀಗಾಗಿ ಸಮ್ಮಿಶ್ರ ಸರ್ಕಾರವನ್ನ ಸುಭದ್ರವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಸಿಎಂ ಕುಮಾರಸ್ವಾಮಿಗಿದೆ. ಈ ಹಿಂದೆ ಬಿಜೆಪಿ 4 ಬಾರಿ ಆಪರೇಷನ್ ಕಮಲಕ್ಕೆ ಮುಂದಾಗಿತ್ತು ಅನ್ನೋ ವರದಿಗಳು ಬಂದಿದ್ದವು. ನಾಲ್ಕು ಬಾರಿ ಆಪರೇಷನ್​ ಕಮಲಕ್ಕೆ ಯತ್ನಗಳು ನಡೆದಾಗ ಸಮ್ಮಿಶ್ರ ಸರ್ಕಾರದ ನಾಯಕರು ಇಟ್ಟ ದಿಟ್ಟ ಹೆಜ್ಜೆಯಿಂದಾಗಿ ಆಪರೇಷನ್ ಫೆಲ್ಯೂರ್ ಆಯ್ತು. ಅದೇ ಐದನೇ ಬಾರಿಗೆ ಬಿ.ಎಸ್.ಯಡಿಯೂರಪ್ಪ ಮತ್ತೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಅದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ ಆಪರೇಷನ್ ಕಮಲಕ್ಕೆ ಆಪರೇಷನ್ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.

ಇತ್ತ, ಕಾಂಗ್ರೆಸ್ ಹಾಗೂ ಜೆಡಿಎಸ್ ತೆಕ್ಕೆಯಲ್ಲಿರುವ ಶಾಸಕರನ್ನು ಆಪರೇಷನ್ ಮಾಡಲು ಬಿಜೆಪಿ ಸಿದ್ಧತೆ ನಡೆಸಿದ್ರೆ, ಸಿಎಂ ಕುಮಾರಸ್ವಾಮಿ ಬಿಜೆಪಿ ಶಾಸಕರಿಗೇ ಗಾಳ ಹಾಕಿದ್ದಾರಂತೆ. ಪದೇ ಪದೇ ‘ಸಮ್ಮಿಶ್ರ ಸರ್ಕಾರವನ್ನ ಬೀಳಿಸ್ತೀವಿ’ ಅಂತಾ ಆಪರೇಷನ್ ಕಮಲಕ್ಕೆ ಮುಂದಾಗುವ ಬಿಜೆಪಿ ನಾಯಕರಿಗೆ ಸರಿಯಾದ ಟ್ರೀಟ್​ಮೆಂಟ್​ ನೀಡಲು ಸಿಎಂ ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಟ್ರೀಟ್​ಮೆಂಟ್​ನ ಮುಂದುವರಿದ ಭಾಗವಾಗಿ ಈಗಾಲೇ ಮೂವರು ಬಿಜೆಪಿ ಶಾಸಕರಿಗೆ ಕುಮಾರಸ್ವಾಮಿ ಗಾಳ ಹಾಕಿದ್ದಾರಂತೆ. ಕುಡುಚಿ ಕ್ಷೇತ್ರದ ಶಾಸಕ ಪಿ.ರಾಜೀವ್, ರಾಯಚೂರು ಕ್ಷೇತ್ರದ ಶಾಸಕ ಡಾ.ಶಿವರಾಜ್ ಪಾಟೀಲ್ ಹಾಗೂ ಕಲ್ಬುರ್ಗಿ ದಕ್ಷಿಣ ಕ್ಷೇತ್ರದ ದತ್ತಾತ್ರೇಯ ಪಾಟೀಲ್ ರೇವೂರ್‌ಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿಯನ್ನ ಬಿಜೆಪಿ ಸೆಳೆದು ತನ್ನ ಆಪರೇಷನ್ ಕಮಲದ ಯೋಜನೆ ಯಶಸ್ವಿಯಾದ್ರೆ, ಸಮ್ಮಿಶ್ರ ಸರ್ಕಾರವನ್ನು ಸುಭದ್ರಗೊಳಿಸಲು ಸಿಎಂ ಕುಮಾರಸ್ವಾಮಿ ಈ ರೀತಿಯ ತಿರುಮಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಮೂವರು ಶಾಸಕರ ಜೊತೆ ಸಿಎಂ ಕುಮಾರಸ್ವಾಮಿ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಆಪರೇಷನ್​ ಕಮಲಕ್ಕೇ ಆಪರೇಷನ್ ಮಾಡಲು ಹೊರಟಿರುವ ಬಗ್ಗೆ ಯಾವುದೇ ಮಾಹಿತಿ ಸೋರಿಕೆ ಆಗದಂತೆ ಸಿಎಂ ಎಚ್ಚರ ಕೂಡ ವಹಿಸಿದ್ದಾರೆ ಎನ್ನಲಾಗಿದೆ.

ವಿಶೇಷ ವರದಿ: ಮಧುಸೂಧನ್


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv