ಯಾವನೊ ಅವನು ಯಶ್, ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ: ಸಿಎಂ ಕುಮಾರಸ್ವಾಮಿ

ಮಂಡ್ಯ: ಯಾವನೊ ಅವನು ಯಶ್ ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ. ಅವರಿಗೆ ಇನ್ನೂ ಗೊತ್ತಿಲ್ಲ, ನನ್ನ ಕಾರ್ಯಕರ್ತರು ಸುಮ್ಮನಿರೋದು, ನನ್ನ ಬಗ್ಗೆ ತಪ್ಪು ಸಂದೇಶ ಹೋಗುತ್ತೆ ಅಂತಾ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.  

ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾನು ನಿರ್ಮಾಪಕ ಆಗಿದ್ದವನು. ನನ್ನಂಥ ನಿರ್ಮಾಪಕ ಇಲ್ಲದಿದ್ರೆ ಎಲ್ಲಿ ಬದುಕ್ತಾವೆ ಇವು. ಸಿನೆಮಾದಲ್ಲಿ ನೋಡೋದು ನಿಜ ಅನ್ಕೋಬೇಡಿ. ನಿಮ್ಮ ಮನೆಯಲ್ಲಿ ನಡೆಯುತಿರೋದು ನಿಜವಾದ ಜೀವನ ಅಂತಾ ಯಶ್ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.

ಇಲ್ಲಿಯವರೆಗೆ ನಾನು ಬಾಯಿ ಮುಚ್ಚಿಕೊಂಡಿದ್ದೆ. ರೈತರು ಆತ್ಮಹತ್ಯೆ ಮಾಡಿಕೊಂಡು ತಾಯಂದಿರು ಕಣ್ಣೀರು ಹಾಕುವಾಗ ಯಾವ ನಟರು ಬಂದಿದ್ರು..? ಇವತ್ತು ಮಂಡ್ಯ ಜನರ ಸ್ವಾಭಿಮಾನ ಎನ್ನುತ್ತಿದ್ದಾರಲ್ಲ. ಆಗಲೇ ಎಂಪಿ ಆಗಿದ್ದೇನೆ ಅಂತ 3 ತಿಂಗಳಿಂದ ನಿಮ್ಮ ತಲೆಗೆ ತುಂಬಿದ್ದಾರೆ. ನಾನು ಮಾಧ್ಯಮಗಳಿಂದ ಬದುಕಿಲ್ಲ. ಮಾಧ್ಯಮದವ್ರು ನೀವು ಏನ್ ಬೇಕಾದ್ರು ಮಾಡಿಕೊಳ್ಳಿ. ನಾನು ಇಂದು ಇರುವುದು ನಿಮ್ಮಿಂದ ಅಲ್ಲ ಅಂತಾ ಕುಮಾರಸ್ವಾಮಿ ಮಾಧ್ಯಮದ ವಿರುದ್ಧ ಹರಿಹಾಯ್ದರು. ನಾನು ಕಲಾವಿದರು ಅಂತ ಗೌರವ ಕೊಟ್ಟಿದಕ್ಕೆ ಹಳ್ಳಿ ಹಳ್ಳಿಯೆಲ್ಲ ಮಾತಾಡ್ತಾರೆ. ಎರಡು ಬಾರಿ ಚಿಕಿತ್ಸೆಗೆ ಒಳಗಾದವನು ನಾನು. ಇಸ್ರೇಲ್‌ಗೆ ಹೋದಾಗಲೇ ನನ್ನ ಜೀವ ಹೋಗಬೇಕಾಗಿತ್ತು. ಆವಾಗ ವೈದ್ಯರು ಚಿಕಿತ್ಸೆ ಕೊಡಲೇ ಬೇಕು ಅಂದ್ರು. ಆದ್ರೆ ನಾನು ಬಂದಿರೋದು ರೈತರಿಗೆ ಒಳ್ಳೆಯದು ಮಾಡಲು ಎಂದು ಯಾವುದಾದ್ರು ಮಾತ್ರೆ ಕೊಡಿ ಸಾಕು ಅಂತಾ ಅಂದಿದ್ದೆ ಅಂತಾ ಸಿಎಂ ಕುಮಾರಸ್ವಾಮಿ ಮತ್ತೆ ತಾವು ಸಾವಿನ ಸನಿಹ ಹೋಗಿದ್ದ ಸನ್ನಿವೇಶವನ್ನ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv