ನಿನ್ನೆಯಷ್ಟೇ ಭೇಟಿಯಾಗಿ ಚರ್ಚಿಸಿದ್ದೆ: ಶಿವಳ್ಳಿ ನಿಧನಕ್ಕೆ ಕುಮಾರಸ್ವಾಮಿ ಸಂತಾಪ

ಹಾಸನ: ಸಚಿವ ಸಿ.ಎಸ್. ಶಿವಳ್ಳಿ ನಿಧನದ ಹಿನ್ನೆಲೆ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಪ್ರಜ್ವಲ್​ ರೇವಣ್ಣ ನಾಮಪತ್ರ ಸಲ್ಲಿಸಿದ ಬಳಿಕ ನಗರದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಸಿ.ಎಸ್. ಶಿವಳ್ಳಿ ಮೃತರಾದ ವಿಚಾರ ಸಿಎಂ ಕುಮಾರಸ್ವಾಮಿಯವರಿಗೆ ತಿಳಿಯಿತು. ಈ ಹಿನ್ನೆಲೆ ಭಾಷಣ ಆರಂಭಕ್ಕೂ ಮುನ್ನಾ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು. ಸಮಾವೇಶದಲ್ಲಿದ್ದ ಸಾವಿರಾರೂ ಕಾರ್ಯಕರ್ತರೂ ಎದ್ದು ನಿಂತು ಸಂತಾಪ ಸೂಚಿಸಿದರು. ಈ ವೇಳೆ ಮಾತನಾಡಿದ ಸಿಎಂ, ನನ್ನ ಆಪ್ತ ಶಿವಳ್ಳಿ ನಿಧನ ನನಗೆ ತೀವ್ರ ನೋವು ತಂದಿದೆ. ನಿನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಅವರೊಂದಿಗಿದ್ದೆ ಅಂತಾ ಹೇಳಿದರು.

ಅಲ್ಲದೇ, ನಿಧನ ಹಿನ್ನೆಲೆ ಶೋಕ ಸಂದೇಶ ನೀಡಿರುವ ಸಿಎಂ, ಪೌರಾಡಳಿತ ಸಚಿವ ಸಿ ಎಸ್ ಶಿವಳ್ಳಿ ಅವರ ನಿಧನ ತೀವ್ರ ಆಘಾತವನ್ನು ತಂದಿದೆ. ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ಕಳೆದ ಮೂರು ದಿನಗಳಿಂದ ಉಪಸ್ಥಿತರಿದ್ದು. ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಶಿವಳ್ಳಿ ಅವರು ಇನ್ನಿಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ. ನಿನ್ನೆಯಷ್ಟೇ ನಾನು ಅವರನ್ನು ಭೇಟಿಯಾಗಿ ರಕ್ಷಣಾ ಕಾರ್ಯಾಚರಣೆ ಕುರಿತು ಚರ್ಚಿಸಿದ್ದೆ. ಕುಂದಗೋಳ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಶಿವಳ್ಳಿ ಅವರು ಜನಾನುರಾಗಿಗಳಾಗಿದ್ದರು. ಅವರ ಸಮಾಜಮುಖಿ ಕೆಲಸ ಅವರಿಗೆ ಹೆಸರು ತಂದಿತ್ತು. ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv