ಬಜೆಟ್​ಗೆ ಮೇಜು ತಟ್ಟಿ ವ್ಯಂಗ್ಯ ಮಾಡಿದವರಿಗೆ ಸಮ್ಮಿಶ್ರ ಸರ್ಕಾರದ ಪರವಾಗಿ ಅಭಿನಂದನೆ: ಸಿಎಂ

ಬೆಂಗಳೂರು: ನಮ್ಮ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಯಾಗುವಾಗ ವಿರೋಧ ಪಕ್ಷದವರು ಮೇಜು ತಟ್ಟಿ ವ್ಯಂಗ್ಯ ಮಾಡಿದ್ರು. ಅವರಿಗೆ ಸಮ್ಮಿಶ್ರ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ವಿಧಾನಸಭೆ ಅಧಿವೇಶನದಲ್ಲಿ ಬಜೆಟ್​ ಮೇಲಿನ ಮುಂದುವರಿದ ಚರ್ಚೆಯಲ್ಲಿ ಮಾತನಾಡಿದ ಅವರು, ನಮಗೆ ಸಂಪೂರ್ಣವಾಗಿ ಆಶೀರ್ವಾದ ಮಾಡಿ ಎಂದಿದ್ದೆ. ಆದರೆ, ನಾನು ಮಂಡಿಸಿರುವ ಬಜೆಟ್​ಗೆ ಬಹಳ ದೊಡ್ಡಮಟ್ಟದಲ್ಲಿ ಟೀಕೆ ಟಿಪ್ಪಣಿಗಳನ್ನು ಗಮನಿಸಿದ್ದೇನೆ. ಮಾಧ್ಯಮಗಳು, ವಿಪಕ್ಷ ನಾಯಕರು ಹಾಗೂ ಶಾಸಕರುಗಳು ಆಡಿರುವ ಮಾತನ್ನು ಗಮನಿಸಿದ್ದೇನೆ. ನಮ್ಮ ಪ್ರಣಾಳಿಕೆಯಲ್ಲಿ ನಾವು ಸಾಕಷ್ಟು ಭರವಸೆಗಳನ್ನು ನೀಡಿದ್ದು ನಿಜ ಎಂದರು.

ರೈತರ ಸಾಲಮನ್ನಾ, ಗರ್ಭಿಣಿ ತಾಯಂದಿರಿಗೆ ವಿಶೇಷ ಅನುದಾನ, ಹಿರಿಯ ನಾಗರೀಕರಿಗೆ ಅನುದಾನ ಸೇರಿದಂತೆ ಅನೇಕ ಭರವಸೆ ಕೊಟ್ಡಿದ್ದು ನಿಜ. ಈ ಕಾರ್ಯಕ್ರಮಗಳನ್ನು ಪ್ರಣಾಳಿಕೆ ಸೇರಿಸಿದ್ದೇ ತಪ್ಪು ಎಂಬಂತೆ ಮಾತನ್ನಾಡಿದ್ದಾರೆ. ಅದರಲ್ಲೂ ನಮ್ಮ ವಿರೋಧ ಪಕ್ಷದ ನಾಯಕರು ಸಾಕಷ್ಟು ಮಾತುಗಳನ್ನು ಆಡಿದ್ದಾರೆ ಎಂದರು.

ಅಲ್ಲದೇ, ನಾವು ಆ ರೀತಿ ಭರವಸೆಗಳನ್ನು ನೀಡಿದ್ದಕ್ಕೆ ಕಾರಣವಿದೆ. ಕಳೆದ ಬಾರಿ 40 ಸ್ಥಾನಗಳನ್ನು ಕೊಟ್ಟಿದ್ದ ಜನತೆ ನಮಗೆ ಈ ಬಾರಿ ಸಂಪೂರ್ಣ ಆಶೀರ್ವಾದ ಮಾಡ್ತಾರೆ ಅಂದುಕೊಂಡು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೆ ಎಂದು ಹೇಳಿದರು.
ನಾನು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇ ತಪ್ಪಾ? ಜನರಿಗೆ ನ್ಯಾಯ ಒದಗಿಸಬೇಕೆಂದು ಭರವಸೆ ನೀಡಿದ್ದೆ. ಅದ್ರೆ ಅದು ಸಾಧ್ಯವಾಗಿಲ್ಲ. ನಾನು ಕುರ್ಚಿಗೆ ಅಂಟಿಕೊಂಡು ಕುಳಿತವನು ಎಂಬ ಮಾತುಗಳನ್ನು ಹೇಳಿದ್ದಾರೆ. ಅಪ್ಪ ಮಕ್ಕಳ ಬಜೆಟ್, ಎರಡು-ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತ ಎಂಬ ಮಾತುಗಳನ್ನು ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅಲ್ಲದೇ, ಮಾಧ್ಯಮಗಳಲ್ಲಿಯೂ ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದಿದೆ. ಇದಕ್ಕೆಲ್ಲಾ ಉತ್ತರ ಕೊಡ್ತೀನಿ ಎಂದು ಬಜೆಟ್ ಬಳಿಕ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv