ಹೆಚ್‌.ಡಿ.ಕುಮಾರಸ್ವಾಮಿ ಅಸಹಾಯಕ ಸಿಎಂ: ಕೆ.ಎಸ್‌.ಈಶ್ವರಪ್ಪ ಕಿಡಿ

ಮಂಡ್ಯ: ಹೆಚ್‌.ಡಿ.ಕುಮಾರಸ್ವಾಮಿ ಹೇಗೋ ಸಿಎಂ ಆದರು‌‌. ರಾಜ್ಯದ ರೈತರು ಸಾಲ ಮನ್ನಾ ಆಗುತ್ತೆ ಎಂಬ ನಂಬಿಕೆಯಲ್ಲಿದ್ದರು. ಬಜೆಟ್‌ನಲ್ಲಿ ಸ್ಪಷ್ಟ ಹೇಳಿಕೆ ಬರದೇ ಇದ್ದರೂ, ಬಿಜೆಪಿ ಒತ್ತಡದಿಂದ ಸಾಲ ಮನ್ನಾ ಮಾಡಿದ್ದಾರೆ. ಆದರೂ ಕುಮಾರಸ್ವಾಮಿ ಸಿಎಂ ಆಗಿ ಅಸಹಾಯಕರಾಗಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕುಟುಕಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಈಶ್ವರಪ್ಪ, ಅವರ ಪಕ್ಷದಲ್ಲಿ ಅವರಿಗೆ ಬೆಂಬಲ ಇದೆಯೋ ಇಲ್ಲವೋ ಗೊತ್ತಿಲ್ಲ. ಸಾಲ ಮನ್ನಾ ವಿಚಾರದಲ್ಲಿ ಸಿಎಂ ತಮ್ಮ ಘನತೆ, ಗೌರವ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ಸಾಲ ಮನ್ನಾ ಮಾಡಬೇಕು. ಇದು ಬಿಜೆಪಿ ಒತ್ತಾಯ ಎಂದು ಹೇಳಿದ್ರು. ವಿರೋಧ ಪಕ್ಷವಾಗಿ, ಪ್ರಣಾಳಿಕೆ ಜಾರಿಗೊಳಿಸೋವರೆಗೂ ಹೋರಾಟ ನಡೆಸುತ್ತೇವೆ. ನಾವು ನಿರುದ್ಯೋಗಿಗಳಲ್ಲ, ಹೋರಾಟಗಾರರು ಎಂದರು.

ನಿಮ್ಮಿಂದ ಕೆಲಸ ಆಗದೇ ಇದ್ದರೆ ರಾಜೀನಾಮೆ ನೀಡಿ ಹೊರ ಬನ್ನಿ. ವಿಧಾನಸೌಧಕ್ಕೆ ಹೋದರೆ ಮಂತ್ರಿಗಳಿಗೆ ಏಜೆಂಟರುಗಳು ಹುಟ್ಟಿಕೊಂಡಿದ್ದಾರೆ. ವರ್ಗಾವಣೆಯಲ್ಲಿ ಇಷ್ಟು ಭ್ರಷ್ಟಾಚಾರ ನಾನು ನೋಡಿಲ್ಲ. ಸಿಎಂ, ಯಾರು‌ ಎಷ್ಟು ಬೇಕಾದರೂ ಲೂಟಿ ಮಾಡಲಿ ಎಂಬ ಭಾವನೆಯಲ್ಲಿದ್ದಾರೆ. ಇರುವಷ್ಟು ದಿನ ಸಿಎಂ ಘನತೆ ಕಾಪಾಡುವ ಹಾಗೆ ಇರಲಿ. ಸರ್ಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ರು.

ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ ದಿನಕ್ಕೊಂದು ಪತ್ರ ಬರೆಯುತ್ತಾರೆ. ನೀವು ಗುಮಾಸ್ತರಾಗಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ ನೀಡಿದ್ರು. ಅಲ್ಲದೇ, ಈಗಿನ ಸಿಎಂರನ್ನು ಮಾಜಿ ಸಿಎಂ ಕಟಕಟೆಯಲ್ಲಿ ನಿಲ್ಲಿಸಲು ಮುಂದಾಗಿದ್ದಾರೆ. ಅವರನ್ನು ತಪ್ಪಿತಸ್ಥರನ್ನಾಗಿ ಮಾಡಬೇಡಿ. ಗಡುವು ನೀಡಿ ಕೆಲಸ ಮಾಡಿಸಿ. ಉತ್ತರ ಕುಮಾರನ ರೀತಿಯಲ್ಲಿ ಪತ್ರ ಬರೆಯಬೇಡಿ. ಕಾಂಗ್ರೆಸ್‌ನವರು ಉತ್ತರ ಕುಮಾರರಲ್ಲ ಎಂದು ಲೇವಡಿ ಮಾಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv