ಮಲ್ಲಿಕಾರ್ಜುನ ಖರ್ಗೆ ಎಂದೋ ಮುಖ್ಯಮಂತ್ರಿ ಆಗ್ಬೇಕಿತ್ತು: ಸಿಎಂ ಕುಮಾರಸ್ವಾಮಿ

ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆ ಎಂದೋ ಮುಖ್ಯಮಂತ್ರಿ ಆಗಬೇಕಿತ್ತು. ಆದ್ರೆ ಅವರ ಪರಿಶ್ರಮಕ್ಕೆ ಸ್ಥಾನ ನೀಡುವಲ್ಲಿ ಲೋಪವಾಗಿದೆ ಎಂಬುದು ನನ್ನ ಭಾವನೆ ಅಂತಾ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿಂಚೋಳಿ ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಶಕ್ತಿ ಪ್ರದರ್ಶನ ಸಭೆಯಲ್ಲಿ ಮಾತನಾಡಿದ ಸಿಎಂ, ಮಲ್ಲಿಕಾರ್ಜುನ ಖರ್ಗೆ ತನ್ನ ಮಗನನ್ನ ಬೆಳೆಸುತ್ತಿದ್ದಾರೆ ಅಂತಾರೆ, ಯಾಕೆ ಬೆಳೆಸಬಾರ್ದು. ಅವರನ್ನೇನು ವಿಧಾನಸೌಧದ ಹಿಂಬಾಗಿಲಿನಿಂದ ಕರೆದುಕೊಂಡು ಹೋಗ್ತಿದ್ದಾರಾ? ಖರ್ಗೆಯವರನ್ನ ಬೆಳೆಸಿದ್ದು ಈ ಭಾಗದ ಜನರು. ಅತ್ಯಂತ ಕ್ರಿಯಾಶೀಲ ವ್ಯಕ್ತಿ, ವಿದ್ಯಾವಂತ ರಾಜಕಾರಣಿ ಪ್ರಿಯಾಂಕ್ ಖರ್ಗೆ. ಇಂತಹ ಮಲ್ಲಿಕಾರ್ಜುನ ಖರ್ಗೆರವರಿಗೆ ನೀವು ನೋವು ಕೊಡಬೇಡಿ. ನಾವು ರಾಜಕಾರಣಿಗಳು ಮಲ್ಲಿಕಾರ್ಜುನ ಖರ್ಗೆಯವರಿಗೆ ನೋವು ಕೊಟ್ಟಿದ್ದೇವೆ. ಪ್ರಾಮಾಣಿಕ, ಅಭಿವೃದ್ಧಿಗೆ ಆಧ್ಯತೆ ಕೊಡುವಲ್ಲಿ ಮುಂಚೂಣಿಯಲ್ಲಿರುವ ನಾಯಕ ಮಲ್ಲಿಕಾರ್ಜುನ ಖರ್ಗೆ. ಐದು ವರ್ಷ ರಾಜ್ಯವನ್ನಾಳಿ ಈಗ ಮತ ಪಡೆಯಲು ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ನಿಮ್ಮ ನಿರೀಕ್ಷೆಯನ್ನು ಈ ವರ್ಷವೇ ಈಡೇರಿಸುವ ಭರವಸೆ ಕೊಡ್ತೇನೆ. ಈ ಸರ್ಕಾರ ನಿಮ್ಮ ಸರ್ಕಾರ, ಬಿಜೆಪಿ ನಾಯಕರ ಹೇಳಿಕೆಗೆ ಕಿವಿಗೊಡಬೇಡಿ. ಚುನಾವಣೆ ಬಳಿಕ ರೈತರ ಸಾಲಮನ್ನಾ ಮಾಡದಿದ್ರೆ ಪ್ರತಿಭಟನೆ ಮಾಡ್ತೀವಿ ಅಂತಾ ಬಿಎಸ್‌ವೈ ಹೇಳಿದ್ದಾರೆ. ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡ್ತೀರಿ ಯಡಿಯೂರಪ್ಪ ಅವರೇ? ಮೇ 23ಕ್ಕೆ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ, ಆದ್ರೆ ಮೇಲೊಬ್ಬ ಕುಳಿತಿದ್ದಾನೆ. ಆ ದೇವರ ಆಶೀರ್ವಾದ, ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯರಂತ ನಾಯಕರ ಆಶೀರ್ವಾದ ಇರೋವರೆಗೂ ಅದು ಸಾಧ್ಯವಿಲ್ಲ ಅಂತಾ ಹೇಳಿದರು.

ಇದೇ ವೇಳೆ, ಏಪ್ರಿಲ್ ತಿಂಗಳವರೆಗೆ ₹11 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೇನೆ. ಸಾಲಮನ್ನಾ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿ ನಿನ್ನೆ ಹುಬ್ಬಳ್ಳಿಯಲ್ಲಿ ರೈತರೊಬ್ಬರು‌ ಲೆಟರ್ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದವರು ರೈತರಿಗೆ ನೋಟಿಸ್ ಕೊಡ್ತಿದಾರೆ, ನ್ಯಾಷನಲೈಸ್ಡ್ ಬ್ಯಾಂಕ್​ನವರು ಹೆಚ್ಚಿನ ಬಡ್ಡಿ ತಗೋತಿದ್ದಾರೆ. ಕೇಂದ್ರ ಸರ್ಕಾರದವರು ರೈತರಿಗೆ ಟೋಪಿ ಹಾಕ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ದುಡಿಮೆಯನ್ನು ಈ ಭಾಗದ ಜನತೆ ಮರೆಯಬಾರದು. ನರೇಂದ್ರ ಮೋದಿ ಸರ್ಕಾರದ ತಪ್ಪುಗಳ ಬಗ್ಗೆ ಧೈರ್ಯವಾಗಿ ಹೋರಾಡೋ ಕೆಲಸ ಮಾಡಿದ್ದು ಖರ್ಗೆ. ಖರ್ಗೆಯವರನ್ನ ಮರವಾಗಿ ಬೆಳೆಸಿದ್ದೀರಿ, ಈಗ ಆ ನೆರಳಲ್ಲಿದೀರಿ. ಈ ಸರ್ಕಾರ ಇನ್ನು ನಾಲ್ಕು ವರ್ಷ ಸುಭದ್ರವಾಗಿಯೇ ಇರುತ್ತೆ. ಚಿಂಚೋಳಿ ಕ್ಷೇತ್ರವನ್ನು ದತ್ತು ತಗೆದುಕೊಂಡು ನಿಮ್ಮ ಕಷ್ಟ ಸುಖ ಬಗೆಹರಿಸುತ್ತೇನೆ ಅಂತಾ ಕುಮಾರಸ್ವಾಮಿ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv